ಬೆಂಗಳೂರು: ಇಸ್ರೋ ತನ್ನ ಶುಕ್ರನ ಯೋಜನೆ(ವೀನಸ್ ಮಿಷನ್) 2025 ರಲ್ಲಿ ಪ್ರಾರಂಭಿಸಲು ನಿರ್ಧರಿಸಿದೆ. ಭಾರತದ ಈ ಯೋಜನೆಯಲ್ಲಿ ಫ್ರಾನ್ಸ್ ಸಹಭಾಗಿತ್ವ ಇರಲಿದೆ ಎಂದು ಫ್ರೆಂಚ್ ಬಾಹ್ಯಾಕಾಶ ಸಂಸ್ಥೆ ಸಿಎನ್‌ಇಎಸ್ ತಿಳಿಸಿದೆ.
ರಷ್ಯಾದ ಫೆಡರಲ್ ಬಾಹ್ಯಾಕಾಶ ಸಂಸ್ಥೆ ರೋಸ್ಕೋಸ್ಮೋಸ್ ಆಂಡ್ ಲ್ಯಾಟ್‌ಮೋಸ್ ವಾತಾವರಣ, ಪರಿಸರ ಮತ್ತು ಬಾಹ್ಯಾಕಾಶ ಅವಲೋಕನ ಪ್ರಯೋಗಾಲಯದೊಂದಿಗೆ ಫ್ರೆಂಚ್ ರಾಷ್ಟ್ರೀಯ ವೈಜ್ಞಾನಿಕ ಸಂಶೋಧನಾ ಕೇಂದ್ರ ಸಿಎನ್‌ಆರ್‌ಎಸ್‌ಗೆ ಸಂಪರ್ಕಿಸಲಾದ ವಿರಾಲ್ (ವೀನಸ್ ಇನ್ಫ್ರಾರೆಡ್ ಅಟ್ಮಾಸ್ಫಿಯರಿಕ್ ಗ್ಯಾಸ್ ಲಿಂಕರ್) ಉಪಕರಣವನ್ನು ಪ್ರಸ್ತಾವನೆಗಳ ಕೋರಿಕೆಯ ನಂತರ ಇಸ್ರೋ ಆಯ್ಕೆ ಮಾಡಿದೆ ಎಂದು ಹೇಳಿಕೆಯಲ್ಲಿ ತಿಳಿಸಿದೆ.
ಇಸ್ರೋ ಅಧ್ಯಕ್ಷ ಕೆ.ಶಿವನ್ ಮತ್ತು ಸಿಎನ್‌ಇಎಸ್ ಅಧ್ಯಕ್ಷ ಜೀನ್-ಯ್ವೆಸ್ ಲೆ ಗಾಲ್ ಈ ಕುರಿತು ಮಾತುಕತೆ ನಡೆಸಿ ಬಾಹ್ಯಾಕಾಶದಲ್ಲಿ ಫ್ರಾನ್ಸ್ ಮತ್ತು ಭಾರತದ ನಡುವಿನ ಸಹಕಾರವನ್ನು ಹೆಚ್ಚಿಸುವ ಬಗ್ಗೆ ಒಮ್ಮತ ಸೂಚಿಸಿದ್ದಾರೆ.
"ಬಾಹ್ಯಾಕಾಶ ಪರಿಶೋಧನೆಯ ಕ್ಷೇತ್ರದಲ್ಲಿ, ಫ್ರಾನ್ಸ್ 2025 ರಲ್ಲಿ ಇಸ್ರೋ ಕೈಗೊಳ್ಳಲಿರುವ ಶುಕ್ರಯಾನದಲ್ಲಿ ಪಾಲ್ಗೊಳ್ಳಲಿದೆ.ಈ ಮೂಲಕ ಮೊದಲ ಬಾರಿಗೆ ಫ್ರೆಂಚ್ ಪೇಲೋಡ್ ಅನ್ನು ಭಾರತೀಯ ಪರಿಶೋಧನಾ ಕಾರ್ಯಾಚರಣೆಯಲ್ಲಿ ಉಡಾವಣೆ ಮಾಡಲಾಗುತ್ತದೆ"ಸಿಎನ್‌ಇಎಸ್ ಹೇಳಿಕೆಯಲ್ಲಿ ತಿಳಿಸಿದೆ. ಆದರೆ ಈ ಕುರಿತು ಇಸ್ರೋದಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.
ಮಂಗಳಯಾನ (ಮಾರ್ಸ್ ಆರ್ಬಿಟರ್ ಮಿಷನ್ )ಮತ್ತು ಚಂದ್ರನ ಮೇಲಿನ ಕಾರ್ಯಾಚರಣೆಗಳ ನಂತರ ಇದೀಗ ಇಸ್ರೋ ಶುಕ್ರನತ್ತ ದೃಷ್ಟಿ ನೆಟ್ಟಿದೆ.
ಫ್ರಾನ್ಸ್ ಮತ್ತು ಭಾರತ ಬಾಹ್ಯಾಕಾಶ ಕ್ಷೇತ್ರದಲ್ಲಿ ದೃಢವಾದ ಸಹಯೋಗವನ್ನು ಹೊಂದಿವೆ. ಪರಮಾಣು, ಬಾಹ್ಯಾಕಾಶ ಮತ್ತು ರಕ್ಷಣಾ ಕಾರ್ಯತಂತ್ರದ ಕ್ಷೇತ್ರಗಳಲ್ಲಿ ಭಾರತ ಸಹಯೋಗ ಹೊಂದಿರುವ ಮೂರು ರಾಷ್ಟ್ರಗಳಲ್ಲಿ ಇದು ಒಂದಾಗಿದೆ.