ತಿರುವನಂತಪುರ:ತುಲಾ ಮಾಸದ ಪೂಜೆಗಳಿಗೆ ನಾಳೆ (ಶುಕ್ರವಾರ) ಶಬರಿಮಲೆ ಸನ್ನಿಧಿಯ ಬಾಗಿಲುಗಳು ತೆರೆಯಲಿದ್ದು 48 ಗಂಟೆಗಳ ಒಳಗೆ ನಡೆಸಿದ ಕೋವಿಡ್ ಪರೀಕ್ಷೆಯ ಫಲಿತಾಂಶ ಕಡ್ಡಾಯವಾಗಿದೆ. ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಗುರುವಾರ ಸಂಜೆ ನಡೆಸಿದ ಸುದ್ದಿಗೋಷ್ಠಿಯಲ್ಲಿ ಈ ವಿಷಯವನ್ನು ಸ್ಪಷ್ಟಪಡಿಸಿದರು.
ವರ್ಚುವಲ್ ಕ್ಯೂ ಸಿಸ್ಟಮ್ ಮೂಲಕ ನೋಂದಾಯಿಸಿಕೊಂಡ 250 ಭಕ್ತರಿಗೆ ಒಂದು ದಿನ ದರ್ಶನಕ್ಕೆ ಅವಕಾಶವಿದೆ. ಭಕ್ತರು ಬೆಟ್ಟ ಏರಲು ಸಮರ್ಥರಾಗಿದ್ದಾರೆಂದು ತಿಳಿಸುವ ವೈದ್ಯಕೀಯ ಪ್ರಮಾಣಪತ್ರವನ್ನೂ ಸಹ ಹಾಜರುಪಡಿಸಬೇಕಾಗುತ್ತದೆ. 10 ರಿಂದ 60 ವರ್ಷದೊಳಗಿನ ಜನರಿಗೆ ಮಾತ್ರ ಸನ್ನಿಧಿ ಪ್ರವೇಶಿಸಲು ಅವಕಾಶ ನೀಡಲಾಗುತ್ತಿದೆ.
ವರ್ಚುವಲ್ ಕ್ಯೂ ಮೂಲಕ ಕಾಯ್ದಿರಿಸುವಾಗ ಭೇಟಿಯ ದಿನಾಂಕ ಮತ್ತು ಸಮಯವನ್ನು ಅನುಮತಿಸಲಾಗಿದೆ. ಈ ಸಮಯದಲ್ಲಿ ಭಕ್ತರು ದರ್ಶನ ತಲುಪಲು ಜಾಗರೂಕರಾಗಿರಬೇಕು ಎಂದು ಸಿಎಂ ಹೇಳಿದರು.
ದೇವಾಲಯಕ್ಕೆ ಭೇಟಿ ನೀಡುವ ಭಕ್ತರು ಕೋವಿಡ್ ಸುರಕ್ಷತಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಸ್ಯಾನಿಟೈಜರ್‍ಗಳು, ಮಾಸ್ಕ್ ಗಳು ಮತ್ತು ಕೈಗವಸುಗಳನ್ನು ಧರಿಸಿರಬೇಕು, ಮತ್ತು ಸರಿಯಾಗಿ ಬಳಸಬೇಕು. ಭಕ್ತರಿಗೆ ಗುಂಪುಗಳಾಗಿ ಪ್ರಯಾಣಿಸಲು ಅವಕಾಶವಿಲ್ಲ. ನಿರ್ದಿಷ್ಟ ಅಂತರ ಕಾಯ್ದುಕೊಂಡು ದೇವಾಲಯ ಸಂದರ್ಶನ ನಡೆಸಬೇಕಾಗುತ್ತದೆ. ವಶಶ್ಚೆರಿಕ್ಕರ ಮತ್ತು ಎರುಮೇಲಿ ಮೂಲಕ ಮಾತ್ರ ಶಬರಿಮಲೆ ಪ್ರವೇಶವನ್ನು ಅನುಮತಿಸಲಾಗಿದೆ. ಉಳಿದೆಲ್ಲ ಮಾರ್ಗಗಳನ್ನು ಮುಚ್ಚಲಾಗಿದೆ. ಬೆಟ್ಟದ ಆರೋಹಣ ಮತ್ತು ದರ್ಶನದ ಸಂದರ್ಭ ಪೆÇಲೀಸರು ನೀಡಿದ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು.
ಶಬರಿಮಲೆಯಲ್ಲಿ ತುಲಾಮಾಸಾ ಪೂಜೆಗೆ ಸಂಬಂಧಿಸಿದಂತೆ ನಿಲಕ್ಕಲ್, ಪಂಪಾ ಮತ್ತು ಸನ್ನಿಧಾನಂನಲ್ಲಿ ಆಸ್ಪತ್ರೆಗಳನ್ನು ಸ್ಥಾಪಿಸಲಾಗಿದೆ. ಈ ಆಸ್ಪತ್ರೆಗಳಿಗೆ ಅರೆವೈದ್ಯಕೀಯ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ವೈದ್ಯರ ನೇಮಕಾತಿ ಗುರುವಾರ ಪೂರ್ಣಗೊಂಡಿದೆ.
ಪಂಪಾ ತ್ರಿವೇಣಿ ಸಂಗಮದಲ್ಲಿ ಸ್ನಾನ ಮಾಡುವುದನ್ನು ಕೋವಿಡ್ ಹಿನ್ನೆಲೆಯಲ್ಲಿ ಅನುಮತಿಸಲಾಗುವುದಿಲ್ಲ. ಸ್ನಾನ ಮಾಡಲು ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ ಎಮದು ಮುಖ್ಯಮಂತ್ರಿ ತಿಳಿಸಿರುವರು.