ತಿರುವನಂತಪುರ: ರಾಜ್ಯಾದ್ಯಂತ ಕೋವಿಡ್ ಸಾವುಗಳ ಸಂಖ್ಯೆ 1,000 ದಾಟಿದೆ ಎಂದು ರಾಜ್ಯ ಆರೋಗ್ಯ ಇಲಾಖೆಯ ಅಧಿಕೃತ ಅಂಕಿ ಅಂಶಗಳು ತಿಳಿಸಿವೆ. ನಿನ್ನೆ 25 ಸಾವುಗಳು ದೃಢಪಟ್ಟಿದೆ ಮತ್ತು ಸಾವಿನ ಸಂಖ್ಯೆ 1,000 ದಾಟಿದೆ. ರಾಜ್ಯದಲ್ಲಿ ನಿನ್ನೆ 9347 ಕೋವಿಡ್ ಪ್ರಕರಣಗಳು ದೃಢಪಟ್ಟಿದ್ದವು. ರಾಜ್ಯದಲ್ಲಿ ಕೋವಿಡ್ ಸೋಂಕಿಗೊಳಗಾಗಿ ನಿರೀಕ್ಷಣೆಯಲ್ಲಿ ಇರುವವರ ಸಂಖ್ಯೆ 2,84,924 ಕ್ಕೆ ಏರಿದೆ.
ರಾಜ್ಯದಲ್ಲಿ 96,316 ಜನರು ಚಿಕಿತ್ಸೆಯಲ್ಲಿ:
ಆರೋಗ್ಯ ಇಲಾಖೆಯ ವರದಿಯನುಸಾರ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ 96,316 ಜನರಿಗೆ ಕೋವಿಡ್ ಸೋಂಕು ಪತ್ತೆಹಚ್ಚಲಾಗಿದೆ. 12804 ಮಂದಿ ಎರ್ನಾಕುಳಂ ಜಿಲ್ಲೆಯೊಂದರಲ್ಲೇ ಇದ್ದು ಅತಿ ಹೆಚ್ಚು ರೋಗಿಗಳನ್ನು ಹೊಂದಿದೆ. ತಿರುವನಂತಪುರ 11720, ಕೊಲ್ಲಂ 7546, ಪತ್ತನಂತಿಟ್ಟು 3925, ಆಲಪ್ಪುಳ 6241, ಕೊಟ್ಟಾಯಂ 5489, ಇಡುಕ್ಕಿ 1338, ತ್ರಿಶೂರ್ 9301, ಪಾಲಕ್ಕಾಡ್ 6541, ಮಲಪ್ಪುರಂ 8869, ಕೋಝಿಕ್ಕೋಡ್ 11755, ವಯನಾಡ್ 1141,ಕಣ್ಣೂರು 6472, ಕಾಸರಗೋಡು 3804 ಎಂಬಂತೆ ವಿವಿಧ ಜಿಲ್ಲೆಗಳಲ್ಲಿ ಭಾನುವಾರದ ವರೆಗೆ ಚಿಕಿತ್ಸೆಯಲ್ಲಿರುವವರ ಸಂಖ್ಯೆಯಾಗಿದೆ.
2,84,924 ಮಂದಿ ನಿರೀಕ್ಷಣೆಯಲ್ಲಿ:
ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಪ್ರಸ್ತುತ 2,84,924 ಮಂದಿ ಕ್ವಾರಂಟೈನ್ ನಲ್ಲಿದ್ದಾರೆ. ಈ ಪೈಕಿ 2,56,172 ಮನೆ / ಸಾಂಸ್ಥಿಕ ಸಂಪರ್ಕತಡೆಯನ್ನು ಮತ್ತು 28,752 ಆಸ್ಪತ್ರೆಗಳಲ್ಲಿದ್ದಾರೆ. ರೋಗಲಕ್ಷಣಗಳೊಂದಿಗೆ ನಿನ್ನೆಯೊಂದೇ ದಿನ 3658 ಜನರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂಬುದು ಗಮನಾರ್ಹ.
ಸಾವಿರ ದಾಟಿದ ಕೋವಿಡ್ ಸಾವುಗಳು:
ನಿನ್ನೆ ಕೋವಿಡ್ ಕಾರಣದಿಂದಾಗಿ 25 ಸಾವುಗಳು ದೃಢಪಟ್ಟಿದೆ. ತಿರುವನಂತಪುರ ಪಲ್ಕುಲಂಗರಾದ ಮೀನಾಕುಮಾರಿ (68), ಪೂಜಾಪುರದ ಪೀರುಮುಹಮ್ಮದ್ (84), ಕೊಲ್ಲಂ ನ ಕ್ಲೆಟಸ್ (70), ಪೆರಿನಾಡ್ ನ ಅಪ್ಪುಕುಟ್ಟನ್ ಪಿಳ್ಳೈ (81), ಪಡಿಯಾಟ್ಟುವಿಳದ ಕುಟ್ಟಿಯಮ್ಮ (63), ಎಮ್ಯಾನುಯೆಲ್ (77) , ವಡಾನಂ ನ ಬೀವಿ ಕುಂಞÂ(72), ಪುನ್ನಪ್ರದ ಅಬೂಬಕರ್ ಜಲೀಲ್(59), ಮುಹಮ್ಮದ ಶಾರದಾ(80), ಕೋಟ್ಟಯಂ ಎರುಮೇಲಿಯ ಅಬ್ದುಲ್ ಖಾದರ್ (80), ಚಂಗನಾಶೇರಿಯ ಕುಟ್ಟಪ್ಪನ್ ಆಚಾರಿ (70), ಕುಟ್ಟನೆಲ್ಲೂರಿನ ವೆಲಪ್ಪನ್ (84), ಕಣ್ಣಾರಂನ ಜೋರ್ಜ್(61), ಪೆರಿಯಂಬಲದ ಅನೀಸ್(84), ಮಲಪುರಂ ಚೆರುವಾಯೂರ್‍ನ ಅಜೀಜ್ (84), ಶ್ರೀಧರನ್ (68), ಕರುಲಾಯದ ರಾಘವನ್ ನಾಯರ್ (72), ಕೊಟ್ಟಾಯಂನ ಕುಂಜುಮೊನ್ ಹಾಜಿ (70), ಮಂಜೇರಿಯ ಕುಂಜಿಮುಹಮ್ಮದ್ (64), ತಲಕ್ಕಾಡ್ ನ ಸೈಯದ್ ಮೊಹಮ್ಮದ್ (52), ಕೋಝಿಕ್ಕೋಡ್ ಓಮನಶ್ಚೇರಿಯ ಇಬ್ರಾಹಿಂ (75), ಪನಂಗಾಡ್ ನ ಗೋಪಾಲನ್(65), ಕಣ್ಣೂರು ಶ್ರೀಕಂಠಪುರದ ಕಣ್ಣನ್(77), ತಿಮಿರಿಯ ಜೋನಿ ಜಿಮ್ಮಿ(13), ಕಾಸರಗೋಡು ಉದುಮದ ದಾಮೋದರನ್(63), ಮಂಗಲ್ಪಾಡಿಯ ನಫೀಸ(58) ಎಂಬವರು ಕೋವಿಡ್ ನಿಂದ ಮೃತಪಟ್ಟವರಾಗಿದ್ದಾರೆ. ಈ ಮೂಲಕ ಒಟ್ಟು ಸಾವಿನ ಸಂಖ್ಯೆ 1003 ಕ್ಕೆ ಏರಿಕೆಯಾಗಿದೆ.
ಈವರೆಗೆ ರಾಜ್ಯದಲ್ಲಿ 35,94,320 ಮಾದರಿಗಳ ಪರೀಕ್ಷೆ:
ಕಳೆದ 24 ಗಂಟೆಗಳಲ್ಲಿ 61,629 ಮಾದರಿಗಳನ್ನು ಪರೀಕ್ಷಿಸಲಾಯಿತು. ದಿನನಿತ್ಯದ ಮಾದರಿಗಳು, ವಿಮಾನ ನಿಲ್ದಾಣ ಕಣ್ಗಾವಲು, ಪೂಲ್ಡ್ ಸೆಂಟಿನೆಲ್, ಸಿಬಿನಾಟ್, ಟ್ರುನಾಟ್, ಸಿ.ಎಲ್.ಐ.ಎ ಮತ್ತು ಆಂಟಿಜೆನ್ ಅಸ್ಸೇ ಸೇರಿದಂತೆ ಒಟ್ಟು 35,94,320 ಮಾದರಿಗಳನ್ನು ಪರೀಕ್ಷೆಗೆ ಕಳುಹಿಸಲಾಗಿದೆ. ಸೆಂಟಿನೆಲ್ ಕಣ್ಗಾವಲಿನ ಭಾಗವಾಗಿ, ಆರೋಗ್ಯ ಕಾರ್ಯಕರ್ತರು, ಅತಿಥಿ ಕೆಲಸಗಾರರು ಮತ್ತು ಸಾಮಾಜಿಕ ಸಂಪರ್ಕ ಹೊಂದಿರುವ ವ್ಯಕ್ತಿಗಳಂತಹ ಆದ್ಯತೆಯ ಗುಂಪುಗಳಿಂದ 2,12,896 ಮಾದರಿಗಳನ್ನು ಪರೀಕ್ಷೆಗೆ ಕಳುಹಿಸಲಾಗಿದೆ.