ಭುವನೇಶ್ವರ್,: ಬ್ರಹ್ಮೋಸ್ ಸೂಪರ್ ಸಾನಿಕ್, ಶೌರ್ಯ ಕ್ಷಿಪಣಿ ಮತ್ತು ರುದ್ರಂ ಕ್ಷಿಪಣಿಗಳ ಯಶಸ್ವಿ ಪ್ರಯೋಗದ ಬೆನ್ನಲ್ಲೇ ಭಾರತವು ಮತ್ತೊಂದು ಯಶಸ್ವಿ ಕ್ಷಿಪಣಿ ಪರೀಕ್ಷೆಯನ್ನು ನಡೆಸಿದೆ.
ಪರಮಾಣು ಸಾಗಿಸುವ ಸಾಮರ್ಥ್ಯದ ಪೃಥ್ವಿ-2 ಕ್ಷಿಪಣಿಯನ್ನು ಒಡಿಶಾದ ಕರಾವಳಿಯಲ್ಲಿ ಸಶಸ್ತ್ರ ಪಡೆಗಳ ಬಳಕೆದಾರ ಪ್ರಯೋಗದ ಭಾಗವಾಗಿ ಶುಕ್ರವಾರ ಸಂಜೆ ಪರೀಕ್ಷೆ ನಡೆಸಲಾಗಿದ್ದು, ಅದರಲ್ಲಿ ಯಶಸ್ವಿಯಾಗಿದೆ. ಸ್ಟ್ರಾಟೆಜಿಕ್ ಫೋರ್ಸ್ ಕಮಾಂಡ್ ಈ ಬಳಕೆದಾರ ಪ್ರಯೋಗ ನಡೆಸಿದೆ.
ದ್ರವ್ಯ ಚಾಲಿತ ಪೃಥ್ವಿ-2 ಕ್ಷಿಪಣಿಯು 250 ಕಿ.ಮೀ. ವ್ಯಾಪ್ತಿಯನ್ನು ಹೊಂದಿದೆ. ಇದು 1 ಟನ್ ಯುದ್ಧ ಸಿಡಿತಲೆಯನ್ನು ಕೊಂಡೊಯ್ಯುವ ಸಾಮರ್ಥ್ಯ ಪಡೆದಿದೆ. 9 ಮೀಟರ್ ಎತ್ತರದ ಕ್ಷಿಪಣಿಯನ್ನು ಸಮಗ್ರ ಮಾರ್ಗದರ್ಶಿ ಕ್ಷಿಪಣಿ ಅಭಿವೃದ್ಧಿ ಕಾರ್ಯಕ್ರಮದಡಿ ಡಿಆರ್‌ಡಿಒ ಅಭಿವೃದ್ಧಿಪಡಿಸಿದ ಮೊದಲ ಕ್ಷಿಪಣಿಯಾಗಿದೆ. ಇದು ಭಾರತದ ಮೊದಲ ಸ್ವದೇಶಿ ನಿರ್ಮಿತ ಮೇಲ್ಮೈನಿಂದ ಮೇಲ್ಮೈಗೆ ಹಾರುವ ಯುದ್ಧ ಕ್ಷಿಪಣಿಯೂ ಹೌದು.
ಕಳೆದ ಮೂರು ವಾರಗಳಲ್ಲಿ ಪೃಥ್ವಿ 2 ಕ್ಷಿಪಣಿಯ ಎರಡನೆಯ ರಾತ್ರಿ ಪ್ರಯೋಗ ಇದಾಗಿದೆ. ಸೆ. 27ರಂದು ಡಿಆರ್‌ಡಿಒ ಈ ಕ್ಷಿಪಣಿಯ ರಾತ್ರಿ ಪ್ರಯೋಗ ಕೈಗೊಂಡಿತ್ತು. ಕಳೆದ 40 ದಿನಗಳಲ್ಲಿ ಭಾರತದ ರಕ್ಷಣಾ ಸಂಶೋಧನಾ ಮತ್ತು ಅಭಿವೃದ್ಧಿ ಸಂಸ್ಥೆ ನಡೆಸಿದ 11ನೇ ಕ್ಷಿಪಣಿ ಪರೀಕ್ಷೆ ಇದಾಗಿದೆ. ನಿರ್ಭಯ್ ಕ್ರೂಸ್ ಕ್ಷಿಪಣಿಯ ಪ್ರಯೋಗವು ಸರಿಯಾಗಿ ನಡೆಯದ ಕಾರಣ ಅದನ್ನು ಡಿಆರ್‌ಡಿಒ ಸ್ಥಗಿತಗೊಳಿಸಿತ್ತು.