ನವದೆಹಲಿ: ಸಾವಿರಾರು ಮಂದಿ ನಾಗರಿಕರಿಗೆ ಮತ್ತು ಅತಿ ಸಣ್ಣ, ಸಣ್ಣ ಮತ್ತು ಮಧ್ಯಮ ಗಾತ್ರದ ಉದ್ಯಮಗಳಿಗೆ ನಿರಾಳವಾಗುವ ವಿಷಯ ಇದಾಗಿದ್ದು, ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್ ಗೆ ಸಲ್ಲಿಸಿರುವ ಅಫಿಡವಿಟ್ಟಿನಲ್ಲಿ 6 ತಿಂಗಳವರೆಗೆ ಸಾಲ ಪಾವತಿ ಅವಧಿ ಮೇಲಿನ ವಿನಾಯಿತಿ ಸಮಯದಲ್ಲಿ 2 ಕೋಟಿ ರೂಪಾಯಿಯವರೆಗಿನ ಸಾಲಗಳ ಬಡ್ಡಿಯ ಮೇಲಿನ ಬಡ್ಡಿಯನ್ನು(ಚಕ್ರಬಡ್ಡಿ) ಮನ್ನಾ ಮಾಡಲಾಗುವುದು ಎಂದು ತಿಳಿಸಿದೆ.
ಚಕ್ರಬಡ್ಡಿಯ ಮನ್ನಾದಿಂದ ಉಂಟಾಗುವ ಆರ್ಥಿಕ ಹೊರೆಯನ್ನು ಸರ್ಕಾರ ಭರಿಸಬೇಕಾಗಿರುವುದೊಂದೇ ಪರಿಹಾರವಾಗಿದೆ. ಎಲ್ಲಾ ಸಾಧ್ಯತೆ ಆಯ್ಕೆಗಳನ್ನು ಕೂಲಂಕುಷವಾಗಿ ಪರಿಶೀಲಿಸಿದ ನಂತರ ಮತ್ತು ಎಲ್ಲಾ ಸಾಧ್ಯತೆಗಳನ್ನು ಅಳೆದು ತೂಗಿ ಸಣ್ಣ ಮಟ್ಟಿನ ಸಾಲಗಾರರಿಗೆ ಈ ಬದಲಾವಣೆ ಸಂದರ್ಭದಲ್ಲಿ ಸಾಲ ಪಾವತಿ ಅವಧಿ ಮೇಲಿನ ವಿನಾಯಿತಿ ಮುಂದುವರಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ.
ಎರಡು ಕೋಟಿಯವರೆಗಿನ ಸಾಲಗಳ ವಿಭಾಗದಲ್ಲಿ ಸಣ್ಣ, ಮಧ್ಯಮ ಗಾತ್ರದ ಉದ್ಯಮಗಳ ಸಾಲಗಳು, ಶಿಕ್ಷಣ ಸಾಲಗಳು, ಗೃಹ ಸಾಲಗಳು, ಗ್ರಾಹಕ ಬಾಳಿಕೆ ಬರುವ ಸಾಲಗಳು, ಕ್ರೆಡಿಟ್ ಕಾರ್ಡ್ ಬಾಕಿ, ವಾಹನ ಸಾಲಗಳು, ವೃತ್ತಿಪರ ಮತ್ತು ಬಳಕೆ ಸಾಲಗಳಿಗೆ ವೈಯಕ್ತಿಕ ಸಾಲಗಳನ್ನು ಒಳಗೊಂಡಿರುತ್ತದೆ.
ಚಕ್ರಬಡ್ಡಿ ಮನ್ನಾದಿಂದ ಉಂಟಾಗುವ ಆರ್ಥಿಕ ಹೊರೆಯನ್ನು ಬ್ಯಾಂಕುಗಳು ಭರಿಸುವುದು ಕಷ್ಟಸಾಧ್ಯ, ಹೀಗಾಗಿ ಸರ್ಕಾರ, ಬಡ್ಡಿಮನ್ನಾವನ್ನು ಸಾಲಪಡೆದ ಅತ್ಯಂತ ದುರ್ಬಲ ವರ್ಗಕ್ಕೆ ಮಾತ್ರ ಸೀಮಿತಗೊಳಿಸಲು ನಿರ್ಧರಿಸಿದೆ ಎಂದು ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್ ಗೆ ಸಲ್ಲಿಸಿರುವ ಅಫಿಡವಿಟ್ಟಿನಲ್ಲಿ ತಿಳಿಸಿದೆ.
ಈ ಕುರಿತು ತಜ್ಞರ ಸಮಿತಿ ನೀಡಿರುವ ಶಿಫಾರಸಿನ ನಂತರ ಕೇಂದ್ರ ಸರ್ಕಾರ ತನ್ನ ನಿಲುವನ್ನು ಬದಲಿಸಿದೆ. ಈ ಹಿಂದೆ ಆರ್ ಬಿಐ ಮತ್ತು ಕೇಂದ್ರ ಸರ್ಕಾರ ಬಡ್ಡಿಯ ಮೇಲಿನ ಬಡ್ಡಿ ಮನ್ನಾಕ್ಕೆ ವಿರೋಧ ವ್ಯಕ್ತಪಡಿಸಿದ್ದವು. ವಿಶೇಷವಾಗಿ ಹೂಡಿಕೆದಾರರು ಮತ್ತು ಇತರ ಸಂಬಂಧಪಟ್ಟವರು ಹಾಗೂ ಈಗಾಗಲೇ ತಮ್ಮ ಬಾಕಿ ಪಾವತಿಯನ್ನು ಕಟ್ಟಿದವರಿಗೆ ಅನ್ಯಾಯವಾಗುತ್ತದೆ ಎಂದು ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್ ಗೆ ಈ ಹಿಂದೆ ಹೇಳಿತ್ತು.
ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಅಶೋಕ್ ಭೂಷಣ್, ಆರ್ ಎಸ್ ರೆಡ್ಡಿ ಮತ್ತು ಎಂಆರ್ ಶಾ ಅವರನ್ನೊಳಗೊಂಡ ನ್ಯಾಯಪೀಠ, ಕೋವಿಡ್-19 ಸಾಂಕ್ರಾಮಿಕ ನಂತರ ಉಂಟಾಗಿರುವ ಆರ್ಥಿಕ ಬಿಕ್ಕಟ್ಟಿನಿಂದ ಬ್ಯಾಂಕಿನಿಂದ ಸಾಲ ಪಡೆದುಕೊಂಡ ಹಲವರಿಗೆ ಸಮಸ್ಯೆಯಾಗಿರುವುದರಿಂದ ತನ್ನ ನಿರ್ಧಾರವನ್ನು ಮರು ಪರಿಶೀಲಿಸುವಂತೆ ಕೇಂದ್ರ ಸರ್ಕಾರಕ್ಕೆ ಸೂಚಿಸಿತ್ತು.
ಈ ಸಂಬಂಧ ನ್ಯಾಯಾಲಯ ಮುಂದಿನ ವಿಚಾರಣೆಯನ್ನು ನಾಡಿದ್ದು ಸೋಮವಾರಕ್ಕೆ ಮುಂದೂಡಿದೆ. ಸಾಲಪಾವತಿ ಅವಧಿ ಮೇಲಿನ ವಿನಾಯಿತಿ ಸಮಯದಲ್ಲಿ ಮುಂದೂಡಲ್ಪಟ್ಟ ಇಎಂಐ ಮೇಲೆ ಬಡ್ಡಿಯ ಮೇಲಿನ ಬಡ್ಡಿಯನ್ನು ಮನ್ನಾ ಮಾಡುವಂತೆ ಕೋರಿ ಹಲವರು ಸುಪ್ರೀಂ ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು.