ನವದೆಹಲಿ: ಕೋವಿಡ್-19ನ ಪರಿಣಾಮ ಎಲ್ಲ ಕ್ಷೇತ್ರಗಳ ಮೇಲೂ ಆಗಿದೆ. ಅದರಲ್ಲೂ ಕುಟುಂಬವೊಂದರ ಆರ್ಥಿಕ ಸ್ಥಿತಿ ಮೇಲೆ ಆಗಿರುವ ಪರಿಣಾಮ ಕುರಿತು ನಡೆದಿರುವ ಸಮೀಕ್ಷೆ ಹಲವು ಕಳವಳಕಾರಿ ಅಂಶಗಳನ್ನು ತೆರೆದಿಟ್ಟಿದೆ.
ಸೆಂಟರ್ ಫಾರ್ ಕೆಟಲೈಸಿಂಗ್ ಚೇಂಜ್ ಎಂಬ ಸ್ವಯಂ ಸೇವಾ ಸಂಸ್ಥೆ ಏಪ್ರಿಲ್, ಜುಲೈ ಮತ್ತು ಆಗಸ್ಟ್‌ನಲ್ಲಿ ಜಾರ್ಖಂಡ್, ಛತ್ತೀಸ್‌ಗಡ, ಬಿಹಾರ ಮತ್ತು ಒಡಿಶಾದಲ್ಲಿ ಒಟ್ಟು ಎರಡು ಸುತ್ತಿನ ಸಮೀಕ್ಷೆ ನಡೆಸಿದೆ.
ಹದಿಹರೆಯದವರನ್ನೇ ಸಮೀಕ್ಷೆಗೆ ಒಳಪಡಿಸಲಾಗಿತ್ತು. ಸಮೀಕ್ಷೆಯ ಭಾಗವಾಗಿದ್ದ 7,324 ಜನರ ಪೈಕಿ ಶೇ 31ರಷ್ಟು ಮಂದಿ ತಮ್ಮ ಕುಟುಂಬದ ಆರ್ಥಿಕ ಸ್ಥಿತಿಯ ಮೇಲೆ ಕೊರೊನಾ ಸೋಂಕು ಉಂಟು ಮಾಡಿದ್ದ ಪರಿಣಾಮದ ಬಗ್ಗೆ ತೀವ್ರ ಆತಂಕಕ್ಕೆ ಒಳಗಾಗಿದ್ದರು ಎಂಬುದು ದೃಢಪಟ್ಟಿದೆ.
'ಕೊರೊನಾದಿಂದಾದ ಪರಿಣಾಮದ ಬಗ್ಗೆ ಹದಿಹರೆಯದವರು ಏನು ಹೇಳುತ್ತಾರೆ' ಎಂಬ ಪ್ರಶ್ನೆ ಮುಂದಿಟ್ಟುಕೊಂಡು ಈ ಸಮೀಕ್ಷೆ ನಡೆಸಲಾಗಿತ್ತು.
ಯುವತಿಯರು ಗಮನಾರ್ಹವಾಗಿ ಲಿಂಗ ತಾರತಮ್ಯ ಎದುರಿಸಿದ್ದಾರೆ. ಪಾಲ್ಗೊಂಡವರ ಪೈಕಿ ಶೇ 12ರಷ್ಟು ಹದಿಹರೆಯದ ಹುಡುಗಿಯರು ಆನ್‌ಲೈನ್ ತರಗತಿ ಕಲಿಯಲು ಸ್ವಂತ ಫೋನ್ ಬಳಸಿದ್ದರೆ, ಅದೇ ರೀತಿ ಶೇ 35ರಷ್ಟು ಹುಡುಗರು ತಮ್ಮ ಸ್ವಂತ ಮೊಬೈಲ್ ಫೋನ್‌ಗಳನ್ನು ಬಳಸಿ ಆನ್‌ಲೈನ್ ಕ್ಲಾಸ್ ಕೇಳಿದ್ದಾರೆ' ಎಂದು ಸಮೀಕ್ಷೆಯಿಂದ ತಿಳಿದುಬಂದಿದೆ.
'ಹುಡುಗರಿಗೆ ಹೋಲಿಸಿದರೆ, ಶೇ 51ರಷ್ಟು ಹುಡುಗಿಯರಿಗೆ ಅಗತ್ಯವಾದ ಪಠ್ಯಪುಸ್ತಕಗಳು ಲಭ್ಯವಾಗಿಲ್ಲ. ಇದು ಕೋವಿಡ್ ಪಿಡುಗು ಬಾಲಕಿಯರನ್ನು ಹೇಗೆ ಶಿಕ್ಷಣದಿಂದ ವಂಚಿತರನ್ನಾಗಿಸಿ, ಅಪಾಯಕ್ಕೆ ತಳ್ಳಿದೆ ಎಂಬುದನ್ನು ಸೂಚಿಸುತ್ತದೆ' ಎಂದು ಸಮೀಕ್ಷೆ ವಿವರಿಸಿದೆ.