ಕೊಚ್ಚಿ: ಒಂದು ವರ್ಷದ ಪುಟ್ಟ ಮಗು ಸಾನ್ವಿ ಎಂ ಪ್ರಜಿತ ತನ್ನ ಕಿಚನ್ ಸೆಟ್ ನ್ನು ಬಳಸಿ ನಿಜವಾಗಿಯೂ ಟೀ, ದೋಸೆ ಮತ್ತು ಬೇರೆ ಬೇರೆ ತಿಂಡಿಗಳನ್ನು ಮಾಡಲು ಆಟವಾಡುತ್ತಾ ಪ್ರಯತ್ನಿಸುತ್ತಿದ್ದಾಗ ಆಕೆಯ ಪೋಷಕರಿಗೆ ಅದು ಗಂಭೀರವಾಗಿ ಕಾಣಿಸಲಿಲ್ಲ. ತಮ್ಮ ಮಗಳು ಏನೋ ಆಟವಾಡುತ್ತಿದ್ದಾಳೆ ಎಂದೇ ಭಾವಿಸಿದ್ದರು.
ಇಂದು ಮಗಳು ಬೆಳೆದು 10 ವರ್ಷದವಳಾಗಿ ಏಷ್ಯಾ ಖಂಡದಲ್ಲಿಯೇ ದಾಖಲೆ ನಿರ್ಮಿಸಿದ್ದಾಳೆ, ಇದು ಕೇರಳದ ಎರ್ನಾಕುಲಂ ಜಿಲ್ಲೆಯ ಸಾನ್ವಿ ಸಾಹಸದ ಕಥೆ.
ಅಡುಗೆ ಮಾಡುವುದು ಅವಳಿಗೆ ರಕ್ತಗತವಾಗಿಯೇ ಬಂದಿದೆ ಎನಿಸುತ್ತದೆ. ನಾವು ಒಳ್ಳೊಳ್ಳೆ ರುಚಿಕರ ತಿಂಡಿಗಳನ್ನು ಇಷ್ಟಪಡುವವರು. ಆಕೆಯ ತಂದೆ ಪ್ರಜಿತ್ ಬಾಬು ವಿಂಗ್ ಕಮಾಂಡರ್ ಆಗಿರುವುದರಿಂದ ಏರ್ ಫೋರ್ಸ್ ಸಿಬ್ಬಂದಿಗಳ ಜೊತೆ ಆಗಾಗ ಪಾರ್ಟಿ ನಡೆಯುತ್ತಿರುತ್ತದೆ. ಆಗೆಲ್ಲ ಸಾನ್ವಿ ಅಲ್ಲಿದ್ದು ನೋಡಿಕೊಂಡು ಹಲವು ಡಿಶ್ ಗಳನ್ನು ಮಾಡುವುದನ್ನು ಕಲಿಯುತ್ತಿದ್ದಳು, ಆಸಕ್ತಿಯಿಂದ ನೋಡುತ್ತಿದ್ದಳು ಎಂದು ಕೇರಳದ ಕಣ್ಣೂರು ಮೂಲದ ಸಾನ್ವಿ ತಾಯಿ ಮಂಜ್ಮಾ ಹೇಳುತ್ತಾರೆ.
ಒಂದು ಸಲ ಸಾನ್ವಿ ಒಂದು ಅಡುಗೆ ಶೋನಲ್ಲಿ ಕೇರಳದ ಪ್ರಖ್ಯಾತ ತಿನಿಸು ಅಡ ಪಾಯಸ ಮಾಡಿದ್ದರಂತೆ. ಆಗ ಸ್ಟೌವ್ ನಲ್ಲಿ ಅವಳಿಗೆ ಮಾಡಲು ಸಾಧ್ಯವಾಗದ್ದರಿಂದ ಮುಂದಿನ ಹಂತಕ್ಕೆ ಸ್ಪರ್ಧೆಗೆ ಹೋಗಲು ಸಾಧ್ಯವಾಗಲಿಲ್ಲವಂತೆ. 6 ವರ್ಷದವಳಾದಾಗ ತಾಯಿಯ ಜೊತೆ ರಿಯಾಲಿಟಿ ಅಡುಗೆ ಸ್ಪರ್ಧೆಗೆ ಹೋಗುತ್ತಿದ್ದಳಂತೆ. ಆಗ ನನ್ನ ಪತಿ ಪಠಾಣ್ ಕೋಟ್ ಗೆ ವರ್ಗವಾಗಿದ್ದರು. ಸಾನ್ವಿಯನ್ನು ಮನೆಯಲ್ಲಿ ಒಬ್ಬಳನ್ನೇ ನಿಲ್ಲಿಸಿ ಹೋಗಲು ಸಾಧ್ಯವಾಗುತ್ತಿರಲಿಲ್ಲ. ಆಗೆಲ್ಲ ಅಡುಗೆ ಶೋ, ಸ್ಪರ್ಧೆಗಳು ನಡೆಯುವಾಗ ಸಾನ್ವಿಯನ್ನು ಜೊತೆಯಲ್ಲಿ ಕರೆದುಕೊಂಡು ಹೋಗುತ್ತಿದ್ದೆ ಎನ್ನುತ್ತಾರೆ.
ಲಾಕ್ ಡೌನ್ ಸಮಯದಲ್ಲಿ ಸಾನ್ವಿ ಸಮಯವನ್ನು ಅಡುಗೆ ಮಾಡುವುದರಲ್ಲಿ, ಹೊಸ ಹೊಸ ಅಡುಗೆಗಳನ್ನು ಕಲಿಯುವುದರಲ್ಲಿ ವಿನಿಯೋಗಪಡಿಸಿಕೊಂಡಿದ್ದಳಂತೆ. ಆಕೆಯ ಅಜ್ಜಿಯನ್ನೇ ಅಡುಗೆ ಮಾಡುವುದರಲ್ಲಿ ಹೋಲುತ್ತಾಳೆ ಎನ್ನುತ್ತಾರೆ ಅಮ್ಮ.
ಸಾನ್ವಿಯ ನೈಪುಣ್ಯತೆ, ಆಸಕ್ತಿ ನೋಡಿ ಯೂಟ್ಯೂಬ್ ಚಾನೆಲ್ ಆರಂಭಿಸಿದ ತಾಯಿ ಮಂಜ್ಮಾ ಅದರಲ್ಲಿ ಮಗಳು ಸರಳವಾಗಿ ರುಚಿಕರವಾಗಿ ಅಡುಗೆ ಮಾಡುವುದನ್ನು ತೋರಿಸುವ ಪ್ರಯತ್ನ ಮಾಡುತ್ತಿದ್ದಾರೆ. ಇಷ್ಟು ಚಿಕ್ಕ ವಯಸ್ಸಿನಲ್ಲಿಯೇ ಅಡುಗೆಯ ಬಗ್ಗೆ ಇರುವ ಆಸಕ್ತಿ ನೋಡಿ ಏಷ್ಯನ್ ಬುಕ್ ಆಫ್ ರೆಕಾರ್ಡ್ಸ್ ಗೆ ಸಂಪರ್ಕಿಸಿದರಂತೆ.
ಅಲ್ಲಿ ಮಕ್ಕಳ ವಿಭಾಗದಲ್ಲಿ ಅಡುಗೆ ಮಾಡುವುದಕ್ಕೆ ಕನಿಷ್ಠ ಸಂಖ್ಯೆಯಿದ್ದು 18 ವಿವಿಧ ತಿಂಡಿಗಳು ಮಾಡಲು ಬರಬೇಕು. ಅದಕ್ಕಿಂತ ಹೆಚ್ಚಿಗೆ ಮಾಡಿದವರನ್ನು ರೆಕಾರ್ಡ್ಸ್ ಗೆ ಆಯ್ಕೆ ಮಾಡಲಾಗುತ್ತದೆ. ಸಾನ್ವಿ ದಾಖಲೆ ನಿರ್ಮಿಸಲು ಪ್ರತಿದಿನ ಹೊಸ ಹೊಸ ಅಡುಗೆ ಮಾಡುವುದನ್ನು ಕಲಿತಳು. ಸ್ಟೌವ್ ನಲ್ಲಿ ಅಡುಗೆ ಮಾಡಿ ಅಭ್ಯಾಸವಿರಲಿಲ್ಲ, ಅದನ್ನು ಕಲಿತಳು, ಒಂದು ಗಂಟೆಯಲ್ಲಿ 33 ತಿನಿಸುಗಳನ್ನು ಮಾಡಿ ದಾಖಲೆ ನಿರ್ಮಿಸಿದ್ದಾಳೆ ಎಂದು ಅಮ್ಮ ಮಂಜ್ಮಾ ಹೆಮ್ಮೆಯಿಂದ ಹೇಳುತ್ತಾರೆ.