HEALTH TIPS

ಬಾಹುಬಲಿ ತಂಡ ನಿರ್ದೇಶನದ 4 ಕೋಟಿ ರೂ.ಗಳ ವೆಚ್ಚದಲ್ಲಿ ಬೇಕಲ ಕೋಟೆಯಲ್ಲಿ ಲೈಟ್ ಅಂಡ್ ಸೌಂಡ್ ಶೋ..... ಆದರೆ ದೃಶ್ಯ ವಿಸ್ಮಯವನ್ನು ನೋಡಲು ನಾವು ಇನ್ನೂ ಕಾಯಬೇಕಾಗಿದೆ

 

       ಕಾಸರಗೋಡು: ಜಿಲ್ಲೆಯ ಐತಿಹಾಸಿಕ ಹೆಮ್ಮೆಯಾದ ಬೇಕಲ ಕೋಟೆಗೆ ಭೇಟಿ ನೀಡುವ ಪ್ರವಾಸಿಗರು ಇನ್ನು ಬೆಳಕು ಮತ್ತು ಧ್ವನಿ ಪ್ರದರ್ಶನದ ವಿಸ್ಮಯತೆಯಲ್ಲಿ ಮೈಮರೆಯಬಹುದು. ಆದರೆ ಕೋವಿಡ್ ದಯೆ ತೋರಬೇಕು!. ಕೋವಿಡ್ ನಿರ್ಬಂಧಗಳಿಗೆ ಹೆಚ್ಚಿನ ರಿಯಾಯಿತಿ ನೀಡಿದ ಕೂಡಲೇ ಪ್ರದರ್ಶನ ಪ್ರಾರಂಭವಾಗಲಿದೆ ಎಂದು ಅಧಿಕಾರಿಗಳು ಹೇಳುತ್ತಾರೆ. ಪ್ರವಾಸೋದ್ಯಮ ಇಲಾಖೆ ಫ್ರೆಂಚ್ ತಂತ್ರಜ್ಞಾನ ವಲಯ ಮತ್ತು ಲುಮಿಯರ್ ನ್ನು ಬಳಸಿಕೊಂಡು ಬೆಳಕು ಮತ್ತು ಧ್ವನಿ ಪ್ರದರ್ಶನವನ್ನು ಆಯೋಜಿಸಿದೆ. ಕೇರಳದಲ್ಲಿ ಇದೇ ಮೊದಲ ಬಾರಿಗೆ ಈ ತಂತ್ರಜ್ಞಾನವನ್ನು 4 ಕೋಟಿ ರೂ. ವೆಚ್ಚದಲ್ಲಿ ತಯಾರಿಗೊಳಿಸಲಾಗಿದೆ.


        ಕೋಟೆಯೊಳಗೆ ವಿಶೇಷವಾಗಿ ಸಿದ್ಧಪಡಿಸಿದ ಸ್ಥಳದಲ್ಲಿ ಬೆಳಕು ಮತ್ತು ಧ್ವನಿ ಪ್ರದರ್ಶನ ನಡೆಯಲಿದೆ. ನವೀನ ಧ್ವನಿ ಮತ್ತು ಬೆಳಕಿನ ವ್ಯವಸ್ಥೆಗಳ ಹಿನ್ನೆಲೆಯಲ್ಲಿ ಬೇಕಲ ಕೋಟೆಯ ಇತಿಹಾಸವನ್ನು ಪ್ರವಾಸಿಗರಿಗೆ ಮತ್ತು ಇತಿಹಾಸ ಸಂಶೋಧಕರಿಗೆ  ನೀಡಲಾಗುವುದು. ಈ ಸ್ಥಳದ ಇತಿಹಾಸ ಮತ್ತು ಸಂಸ್ಕೃತಿಯನ್ನು ಬೆಳಕು ಮತ್ತು ಧ್ವನಿ ಪ್ರದರ್ಶನದ ಮೂಲಕ ಪ್ರಸ್ತುತಪಡಿಸಲಾಗುವುದು. ಕೇಂದ್ರ ಪುರಾತತ್ವ ಇಲಾಖೆಯ ಸಹಯೋಗದೊಂದಿಗೆ ಆಯೋಜಿಸಲಾಗುವ  ಈ ಪ್ರದರ್ಶನದ ಆಗಮನದೊಂದಿಗೆ ಸಂಜೆ ವೇಳೆ ಕೋಟೆ ಮುಚ್ಚಲಾಗುವುದು ಎಂಬ ದೂರುಗಳಿಗೆ ಈ ಮೂಲಕ ಅಂತ್ಯ ಕಾಣಲಿದೆ.  ಪ್ರದರ್ಶನವನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ಸಚಿವ ಕಡಕಂಪಲ್ಲಿ ಸುರೇಂದ್ರನ್ ಉದ್ಘಾಟಿಸಿದರು.


              ಬಾಹುಬಲಿ ತಂಡ ನಿರ್ದೇಶನ !!:

      ದೃಷ್ಟಿ ವಿಸ್ಮಯದ ಬಾಹುಬಲಿ ಚಿತ್ರಕಥೆಗಾರ ವಿಜೇಂದ್ರ ಪ್ರಸಾದ್ ನೇತೃತ್ವದ ತಂಡ ಇಲ್ಲಿಯ ತಂತ್ರಜ್ಞಾನದ ಹಿಂದಿರುವರು. ಚಲನಚಿತ್ರ ತಾರೆಯರಾದ ಜಯರಾಮ್ ಮತ್ತು ಭಾಗ್ಯಲಕ್ಷ್ಮಿ ಹಿನ್ನೆಲೆ ಗಾಯನ ನೀಡಿರುವರು. ಇತಿಹಾಸಕಾರರಾದ ಡಾ. ಸಿ ಬಾಲನ್, ಡಾ. ಶಿವದಾಸನ್ ಅವರ ಕೃತಿಗಳನ್ನು ಆಧರಿಸಿ ಪ್ರದರ್ಶನ ಸಿದ್ದಪಡಿಸಲಾಗಿದೆ. ಮೂಲಸೌಕರ್ಯವನ್ನು ಬೆಂಗಳೂರಿನಲ್ಲಿ ಬಿಎನ್‍ಎ ಟೆಕ್ನಾಲಜಿ ಕನ್ಸಲ್ಟಿಂಗ್ ಒದಗಿಸಿದೆ. ಕಾಸರಗೋಡಿನ ಹಿಂದಿನ ಜಿಲ್ಲಾಧಿಕಾರಿ  ಆನಂದ್ ಸಿಂಗ್ ಮತ್ತು ಜಿಲ್ಲಾ ಪ್ರವಾಸೋದ್ಯಮ ಪ್ರಚಾರ ಮಂಡಳಿ ಕಾರ್ಯದರ್ಶಿ ಪಿ.ಮುರಲೀಧರನ್ ಅವರು 2010 ರಲ್ಲಿ ಬೆಳಕು ಮತ್ತು ಧ್ವನಿ ಪ್ರದರ್ಶನದ ಕಲ್ಪನೆಯನ್ನು ಮಂಡಿಸಿದ್ದರು. ಬಳಿಕ ಸಲ್ಲಿಸಿದ ಯೋಜನೆಯು ಹಲವಾರು ಕಾರಣಗಳಿಗಾಗಿ ವಿಳಂಬವಾಯಿತು. ಇದನ್ನು ಭಾರತದ ಕೇಂದ್ರ ಪುರಾತತ್ವ ಸಮೀಕ್ಷೆ ತೆರವುಗೊಳಿಸಿದೆ. ಹಾಲಿ ಜಿಲ್ಲಾಧಿಕಾರಿ  ಡಾ.ಡಿ ಸಜಿತ್ ಬಾಬು ಮತ್ತು ಡಿಟಿಪಿಸಿ ಕಾರ್ಯದರ್ಶಿ ಬಿಜು ರಾಘವನ್ ಅವರ ನಿರಂತರ ಪ್ರಯತ್ನಗಳು ಇದರ ಹಿಂದೆ ಇವೆ.

              ಪ್ರದರ್ಶನವು ಸಂಜೆ ಪ್ರಾರಂಭ:

      ಕಂಪ್ಯೂಟರ್ ಲೇಸರ್ ಕಿರಣಗಳು ಮತ್ತು ಆಡಿಯೊ ವಿಡಿಯೋ ಸೆಟಪ್ ಹಿನ್ನೆಲೆಯಲ್ಲಿ ಕೋಟೆಯ ಬುರುಜುಗಳು ಮತ್ತು ಕೋಟೆಯ ಮರಗಳೊಂದಿಗೆ ಪ್ರದರ್ಶನವು ಸಂಜೆ ಪ್ರಾರಂಭವಾಗಲಿದೆ. 240 ಆಸನಗಳನ್ನು ವ್ಯವಸ್ಥೆ ಮಾಡಲಾಗಿದೆ. ಮಲಯಾಳಂನಲ್ಲಿ 40 ನಿಮಿಷಗಳ ಕಾರ್ಯಕ್ರಮ ನಡೆಯಲಿದೆ. ಪ್ರೇಕ್ಷಕರು 30 ರಿಂದ 50 ರ ನಡುವೆ ಇದ್ದರೆ, ಕಾರ್ಯಕ್ರಮವು ಇಂಗ್ಲಿಷ್‍ನಲ್ಲಿಯೂ ಇರಲಿದೆ. ಪ್ರಸ್ತುತ ಟಿಕೆಟ್ ದರ ಪ್ರತಿ ವ್ಯಕ್ತಿಗೆ 125 ರೂ. ಈ ಪೈಕಿ 25 ರೂ.ಗಳ ಪ್ರವೇಶ ಶುಲ್ಕವನ್ನು ಭಾರತೀಯ ಪುರಾತತ್ವ ಸಮೀಕ್ಷೆ (ಎಎಸ್‍ಐ) ಗೆ ಪಾವತಿಸಲಾಗುವುದು. ಬಾಕಿ ಮೊತ್ತವನ್ನು ಡಿಟಿಪಿಸಿ ಮತ್ತು ಸರ್ವೇ ಆಫ್ ಇಂಡಿಯಾ(ಎ ಎಸ್ ಐ)ಕ್ಕೆ ಸಮಾನವಾಗಿ ಹಂಚಲಾಗುತ್ತದೆ. ರಾತ್ರಿ ವೇಳೆ ಪ್ರದರ್ಶನಕ್ಕೆ ಭೇಟಿ ನೀಡುವವರಿಗೆ ಕೋಟೆಯ ಉಳಿದ ಭಾಗಗಳಿಗೆ ಪ್ರವೇಶಿಸಲು ಅವಕಾಶವಿರುವುದಿಲ್ಲ.


         ಬೇಕಲ ಕೋಟೆ:

   ಬೇಕಲ ಕೋಟೆ ಕೇರಳದಲ್ಲಿ ಅಸ್ತಿತ್ವದಲ್ಲಿರುವ ಅತಿದೊಡ್ಡ ಕೋಟೆಗಳಲ್ಲಿ ಒಂದಾಗಿದೆ ಮತ್ತು ದೇಶದ ಗಮನಾರ್ಹ ಪ್ರವಾಸಿ ಆಕರ್ಷಣೆಗಳಲ್ಲಿ ಒಂದಾಗಿದೆ. 30 ಎಕರೆ ಪ್ರದೇಶದಲ್ಲಿ ವ್ಯಾಪಿಸಿರುವ ಈ ಕೋಟೆಯು ಅರೇಬಿಯನ್ ಸಮುದ್ರದ ಅದ್ಭುತ ನೋಟವನ್ನು ನೀಡುತ್ತದೆ. 1645 ಮತ್ತು 1660 ರ ನಡುವೆ ಕುಂಬ್ಳೆಯ ನಾಯಕರಲ್ಲಿ ಒಬ್ಬರಾದ ಶಿವಪ್ಪ ನಾಯಕರಿಂದ ಬೇಕಲ ಕೋಟೆಯನ್ನು ನಿರ್ಮಿಸಲಾಗಿದೆ ಎಂದು ಇತಿಹಾಸ ತಿಳಿಸುತ್ತದೆ. ಹಿರಿಯ ವೆಂಕಟಪ್ಪ ನಾಯಕ ಅವರು ಕೋಟೆಯ ನಿರ್ಮಾಣವನ್ನು ಪ್ರಾರಂಭಿಸಿದರು. ಮತ್ತು ಅದನ್ನು ಶಿವಪ್ಪ ನಾಯಕರು ಪೂರ್ಣಗೊಳಿಸಿದರು ಎಂಬುದು ಇತಿಹಾಸ.

       ನಂತರ, 1760 ರ ದಶಕದಲ್ಲಿ, ಮೈಸೂರು ರಾಜ ಹೈದರ್ ಅಲಿ ಕೋಟೆಯನ್ನು ವಶಪಡಿಸಿಕೊಂಡನು. ಬಳಿಕ ಟಿಪ್ಪು ಸುಲ್ತಾನ್ ಆಳ್ವಿಕೆಯಲ್ಲಿ, ಈ ಕೋಟೆ ತುಳುನಾಡು ಮತ್ತು ಮಲಬಾರ್‍ನ ಪ್ರಮುಖ ಕೇಂದ್ರವಾಯಿತು. ಬೇಕಲ ಕೋಟೆಯನ್ನು ಈಗ ಭಾರತದ ಕೇಂದ್ರ ಪುರಾತತ್ವ ಸಮೀಕ್ಷೆ ಸಂರಕ್ಷಿಸುತ್ತಿದೆ. ಬೇಕಲ ಪ್ರದೇಶವನ್ನು ಅಂತರರಾಷ್ಟ್ರೀಯ ಬೀಚ್ ಪ್ರವಾಸಿ ತಾಣವಾಗಿ ಅಭಿವೃದ್ಧಿಪಡಿಸುವ ಉದ್ದೇಶದಿಂದ 1995 ರಲ್ಲಿ ರೂಪುಗೊಂಡ ಬೇಕಲ ರೆಸಾರ್ಟ್ ಡೆವಲಪ್‍ಮೆಂಟ್ ಕಾಪೆರ್Çರೇಶನ್ ಲಿಮಿಟೆಡ್ ಇಲ್ಲಿ ವಿವಿಧ ಯೋಜನೆಗಳನ್ನು ಅಭಿವೃದ್ಧಿಪಡಿಸುತ್ತಿದೆ.

       ಇಲ್ಲೂ ಮಲತಾಯಿ ಧೋರಣೆ:

    ಕಾಸರಗೋಡಿನ ಕನ್ನಡ ಸಾಂಸ್ಕøತಿಕತೆಯ ಧ್ಯೋತಕವಾದ ಬೇಕಲ ಕೋಟೆಯಲ್ಲಿ ಪ್ರಸ್ತುತ ನಿರ್ಮಿಸಲಾದ ಅತ್ಯಾಧುನಿಕ ಪ್ರದರ್ಶನದಲ್ಲಿ ಮಲೆಯಾಳ ಮತ್ತು ಆಂಗ್ಲ ಭಾಷೆ ಮಾತ್ರ ಇದೆ ಎನ್ನುವುದು ಆಳುವವರ ಮಲತಾಯಿ ಧೋರಣೆಯ ಪ್ರತೀಕವಾಗಿದೆ. ವಾಣಿಜ್ಯ ಉದ್ದೇಶಗಳಿಗಾಗಿ ಇಂತಹ ವ್ಯವಸ್ಥೆ ಅಳವಡಿಸುತ್ತಿರುವುದಾದರೂ ಮೂಲ ಪರಂಪರೆಯನ್ನು ಮರೆಮಾಚುವ ಹುನ್ನಾರ ಅಡಗಿದಂತೆ ಕಾಣಸುತ್ತಿದೆ. ಈ ಬಗ್ಗೆ ಕನ್ನಡಿಗರು ಎಚ್ಚೆತ್ತುಕೊಳ್ಳುವ ಅಗತ್ಯ ತುರ್ತು ಇದೆ.  


  

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries