ನವದೆಹಲಿ: ಕಳೆದ ಹಣಕಾಸು ವರ್ಷದಲ್ಲಿ ಮುದ್ರಣ, ಎಲೆಕ್ಟ್ರಾನಿಕ್ ಮತ್ತು ಹೊರಾಂಗಣ ಜಾಹೀರಾತುಗಳಿಗಾಗಿ ಕೇಂದ್ರದ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರವು ₹713.20 ಕೋಟಿ ಖರ್ಚು ಮಾಡಿದೆ.
ಈ ಸಂಗತಿ ಮಾಹಿತಿ ಹಕ್ಕು ಕಾಯ್ದೆ ಅಡಿಯಲ್ಲಿ ಸಲ್ಲಿಸಲಾಗಿದ್ದ ಅರ್ಜಿಗೆ ಪ್ರತಿಯಾಗಿ ಸಿಕ್ಕ ಉತ್ತರದ ಮೂಲಕ ಬಹಿರಂಗವಾಗಿದೆ.
ಆರ್‌ಟಿಐ ಕಾರ್ಯಕರ್ತ ಜತಿನ್ ದೇಸಾಯಿ ಎಂಬುವವರು ಸಲ್ಲಿಸಿದ್ದ ಅರ್ಜಿಗೆ ಉತ್ತರ ನೀಡಿರುವ ಮಾಹಿತಿ ಮತ್ತು ಪ್ರಸಾರ ಸಚಿವಾಲಯ, ಕೇಂದ್ರ ಸರ್ಕಾರವು 2019-2020ರ ಅವಧಿಯಲ್ಲಿ ದಿನಂಪ್ರತಿ ಸಾರಸರಿ ₹1.95 ಕೋಟಿ ಹಣ ಖರ್ಚು ಮಾಡಿರುವುದಾಗಿ ಹೇಳಿದೆ.
₹295.05 ಕೋಟಿಗಳನ್ನು ಮುದ್ರಣ ಮಾಧ್ಯಮದ ಜಾಹೀರಾತಿಗಾಗಿ ಖರ್ಚು ಮಾಡಿದ್ದರೆ, ₹317.05 ಕೋಟಿಯನ್ನು ಎಲೆಕ್ಟ್ರಾನಿಕ್ ಮಾಧ್ಯಮಗಳಲ್ಲಿನ ಜಾಹೀರಾತಿಗಾಗಿ ವ್ಯಯಿಸಲಾಗಿದೆ. ₹101.1 ಕೋಟಿಯನ್ನು ಹೊರಾಂಗಣ ಜಾಹೀರಾತಿಗಾಗಿ ವಿನಿಯೋಗಿಸಲಾಗಿದೆ ಎಂದು ಇಲಾಖೆಯು ಅರ್ಜಿಗೆ ನೀಡಿರುವ ಉತ್ತರದಲ್ಲಿ ಹೇಳಿದೆ.
ಆದರೆ, ವಿದೇಶದ ಜಾಹೀರಾತುಗಳಿಗೆ ಮಾಡಲಾದ ಖರ್ಚಿನ ವಿವರವನ್ನು ಇಲಾಖೆ ಒದಗಿಸಿಲ್ಲ.