ಕುಂಬಳೆ: ಸ್ಥಳೀಯಾಡಳಿತ ಮತದಾರ ಪಟ್ಟಿಯಲ್ಲಿ ವ್ಯಾಪಕ ಅವ್ಯವಹಾರ ನಡೆದಿರುವುದಾಗಿ ಬಿಜೆಪಿ ಆರೋಪಿಸಿದೆ.
ಪೈವಳಿಕೆ ಗ್ರಾಮ ಪಂಚಾಯತಿಯ ಸ್ಥಳೀಯಾಡಳಿತದ ಪ್ರಕಟಿತ ಮತದಾರ ಪಟ್ಟಿಯಲ್ಲಿ ವ್ಯಾಪಕ ನಕಲಿ ಮತದಾರರನ್ನು ಒಳಪಡಿಸಿರುವುದಾಗಿ ಬಿಜೆಪಿ ಆರೋಪಿಸಿದೆ.
ಗ್ರಾಮ ಪಂಚಾಯತಿನ 16 ನೇ ವಾರ್ಡಿನ ಕಯ್ಯಾರಿನಲ್ಲಿ ಸುಮಾರು 80 ರಷ್ಟು ನಕಲಿ ಮತಗಳನ್ನು ಒಳಪಡಿಸಿರುವುದಾಗಿ ಪತ್ತೆ ಹಚ್ಚಲಾಗಿದೆ.ಇದರಲ್ಲಿ ಹೆಚ್ಚಿನ ದಾಖಲೆಗಳನ್ನು ತಿರುಚಿ ಇರಿಸಿ ವಂಚಿಸಲಾಗಿದೆ.ಅನ್ಯ ಪಂಚಾಯತಿನಲ್ಲಿ ವಾಸವಾಗಿರುವ ಪಡಿತರ ಕಾರ್ಡ್,ಆಧಾರ ಕಾರ್ಡುಗಳನ್ನು ತಿದ್ದಿ ನಕಲಿ ಜೆರಾಕ್ಸ್ ಪ್ರತಿಗಳನ್ನು ಇರಿಸಲಾಗಿದೆ. ಸಂಭಂಧಿಕರಲ್ಲದ ಮನೆಯಲ್ಲಿ ವಾಸವಾಗಿರುವುದಾಗಿ ದಾಖಲಿಸಲಾಗಿದೆ.ಇದಕ್ಕೆ ಗ್ರಾಮ ಪಂಚಾಯತಿಯ ಮಾಜಿ ಸದಸ್ಯರೋರ್ವರು ಮತ್ತು ಗ್ರಾ.ಪಂ.ನ ಕೆಲವು ನೌಕರರು ಪರೋಕ್ಷವಾಗಿ ಬೆಂಬಲಿಸಿರುವುದಾಗಿ ಬಿಜೆಪಿ ಆರೋಪಿಸಿದ್ದು ಇದನ್ನು ತನಿಖೆ ನಡೆಸಿ ಆರೋಪಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ರಾಜ್ಯ ಚುನಾವಣಾ ಆಯುಕ್ತರ ಸಹಿತ ಮೇಲಾಧಿಕಾರಿಗಳಿಗೆ ಬಿಜೆಪಿ ದೂರು ಸಲ್ಲಿಸಿದೆ.
ಕುಂಬಳೆ ಗ್ರಾಮ ಪಂಚಾಯತಿಯ 21ನೇ ವಾರ್ಡಿನ ಮಾಟ್ಟಂಗುಳಿಯಲ್ಲಿ ವಾಸವಾಗಿರುವ ಪರಿಶಿಷ್ಟ ಜಾತಿಯ ಸುಮಾರು 250 ರಷ್ಟು ಮತ್ತು ಬಂಬ್ರಾಣ 4 ನೇ ವಾರ್ಡು ಸಹಿತ ಸುಮಾರು ಒಟ್ಟು 275 ರಷ್ಟು ಬಿಜೆಪಿ ಮತದಾರರನ್ನು ಮತದಾರ ಪಟ್ಟಿಯಿಂದ ಹೊರತು ಪಡಿಸಲಾಗಿದೆ.ಇದರ ವಿರುದ್ಧ ಬಿಜೆಪಿ ಗ್ರಾಮ ಪಂಚಾಯತ್ ಸದಸ್ಯರು ಗ್ರಾಮ ಪಂಚಾಯತ್ ಅಧಿಕಾರಿಗಳಿಗೆ ದಿಗ್ಭಂಧನ ಹಾಕಿ ಪ್ರತಿಭಟಿಸಿರುವರು.ಈ ಅವ್ಯವಹಾರಕ್ಕೆ ಗ್ರಾಮ ಪಂಚಾಯತಿನ ಓರ್ವ ಸ್ಥಾಯೀ ಸಮಿತಿ ಅಧ್ಯಕ್ಷರು ಮತ್ತು ಸಹಾಯಕ ಕಾರ್ಯದರ್ಶಿಯವರು ಪರೋಕ್ಷ ಬೆಂಬಲ ನೀಡಿದ್ದು ಇವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂಬುದಾಗಿ ಬಿಜೆಪಿ ರಾಜ್ಯ ಚುನಾವಣಾ ಆಯುಕ್ತರಿಗೆ,ಜಿಲ್ಲಾಧಿಕಾರಿಗಳಿಗೆ ಮತ್ತು ಪಂಚಾಯತ್ ಅಧಿಕಾರಿಗಳಿಗೆ ದೂರು ಸಲ್ಲಿಸಿರುವರು.
ಮಂಗಲ್ಪಾಡಿ ಗ್ರಾಮ ಪಂಚಾಯತಿಯನ್ನೂ ಇದೇ ರೀತಿ ಅಡಳಿತ ಪಕ್ಷ ಅವ್ಯವಹಾರ ನಡೆಸಿದ್ದು ಬಿಜೆಪಿ ಮತದಾರರನ್ನು ಹೊರತು ಪಡಿಸಿರುವುದಾಗಿ ಬಿಜೆಪಿ ಆರೋಪಿಸಿದ್ದು ಉನ್ನತ ಅಧಿಕಾರಿಗಳಿಗೆ ದೂರು ಸಲ್ಲಿಸಲಾಗಿದೆ.
ಮತದಾರ ಪಟ್ಟಿ ಗೊಂದಲದ ಗೂಡಾಗಿದೆ.ಯಾರ್ಯಾರ ಮನೆಯಲ್ಲಿ ಯಾರ್ಯಾರದೋ ಹೆಸರಿದೆ.ಮನೆ ನಂಬ್ರ,ಪ್ರಾಯ,ಸಂಭಂಧ ಪರಸ್ಪರ ಸಾಮ್ಯತೆ ಇಲ್ಲವಾಗಿದೆ.
ಅಲ್ಲದೆ ಕೆಲವರ ಹೆಸರು ತಪ್ಪಾಗಿ ಹೆಸರು ತಪ್ಪಾಗಿದ್ದು ಕೆಲವರ ಹೆಸರು ಅಪೂರ್ಣವಾಗಿದೆ.ಇದು ಅನೇಕ ವರ್ಷಗಳಿಂದ ನಡೆದು ಬಂದಿರುವ ಸಂಪ್ರದಾಯವಾಗಿದೆ ಎಂದುಬಿಜೆಪಿ ಆರೋಪಿಸಿದೆ.