ಅಬ್ದುಲ್ ಖಾದಿರ್ ಎಂಬವರ ಮನೆಯಿಂದ ಒಂದು ಟನ್ ಶ್ರೀಗಂಧವನ್ನು ವಶಪಡಿಸಿಕೊಳ್ಳಲಾಗಿದೆ.
ಇಂದು ಮುಂಜಾನೆ 4.30 ಕ್ಕೆ ಈ ಘಟನೆ ನಡೆದಿದೆ. ಜಿಲ್ಲಾಧಿಕಾರಿಗಳ ವಾಹನ ಚಾಲಕ ಶ್ರೀಜಿತ್ ಮಧ್ಯರಾತ್ರಿಯಲ್ಲಿ ಕ್ಯಾಂಪ್ ಆಫೀಸ್ ಬಳಿಯ ಮನೆಯೊಂದರಲ್ಲಿ ಅನುಮಾನಾಸ್ಪದ ಜನರನ್ನು ಕಂಡು ಜಿಲ್ಲಾಧಿಕಾರಿ
ಡಾ.ಡಿ.ಸಜಿತ್ ಬಾಬು ಅವರಿಗೆ ಮಾಹಿತಿ ನೀಡಿದರು. ನಂತರ ಕಲೆಕ್ಟರ್ ಡಾ.ಡಿ.ಸಜೀತ್ ಬಾಬು ಮತ್ತು ಗನ್ ಮ್ಯಾನ್ ನೇರವಾಗಿ ಆ ಮನೆಗೆ ತೆರಳಿ ವೀಕ್ಷಿಸಿದರು.
ಈ ವೇಳೆ ಮೂವರು ಆಗಂತುಕರು ಮನೆಯ ಮುಂದೆ ನಿಲ್ಲಿಸಿದ್ದ ಲಾರಿಯಲ್ಲಿ ಪ್ಲಾಸ್ಟಿಕ್ ಚೀಲಗಳಲ್ಲಿ ಶ್ರೀಗಂಧವನ್ನು ಲೋಡ್ ಮಾಡುತ್ತಿದ್ದರು. ಜಿಲ್ಲಾಧಿಕಾರಿಗಳನ್ನು ಕಂಡ ತಕ್ಷಣ ಅಲ್ಲಿದ್ದವರು ಕಾಲ್ಕಿತ್ತರು. ನಂತರ ಲಾರಿಯನ್ನು ಪರಿಶೀಲಿಸಿದಾಗ ಶ್ರೀಗಂಧದ ಕೊರಡುಗಳು ಪತ್ತೆಯಾಗಿದೆ. ತಂಡ ಸಿಮೆಂಟ್ ಮಾರಾಟದ ಮರೆಯಲ್ಲಿ ಲಾರಿಯಲ್ಲಿ ಶ್ರೀಗಂಧವನ್ನು ಕಳ್ಳಸಾಗಣೆ ಮಾಡಲು ಯತ್ನಿಸುತ್ತಿರುವುದಾಗಿ ತಿಳಿದುಬಂದಿದೆ. ನಂತರದ ಶೋಧದಲ್ಲಿ ಮನೆಯ ಹಿಂದಿನ ಕೋಣೆಯಲ್ಲಿ 29 ಚೀಲ ಶ್ರೀಗಂಧದ ಕೊರಡುಗಳು ಪತ್ತೆಯಾಗಿದೆ.
ಬಳಿಕ ಅರಣ್ಯ ಅಧಿಕಾರಿಗಳಿಗೆ ಮಾಹಿತಿ ನೀಡಲಾಯಿತು. ವಶಪಡಿಸಿಕೊಂಡ ಶ್ರೀಗಂಧವನ್ನು ಅರಣ್ಯ ಇಲಾಖೆಗೆ ಹಸ್ತಾಂತರಿಸಲಾಗಿದೆ. ಆದರೆ, ಆರೋಪಿಗಳನ್ನು ಬಂಧಿಸಲು ಸಾಧ್ಯವಾಗಿಲ್ಲ. ವಶಪಡಿಸಿಕೊಂಡ ಕೊರಡುಗಳ ಬೆಲೆ ಸುಮಾರು 2.5 ಕೋಟಿ ರೂ. ಎಂದು ಅಂದಾಜಿಸಲಾಗಿದೆ. ಇತ್ತೀಚಿನ ದಿನಗಳಲ್ಲಿ ಇದು ಅತಿ ದೊಡ್ಡ ಶ್ರೀಗಂಧದ ಬೇಟೆ ಎಂದು ಅರಣ್ಯ ಅಧಿಕಾರಿಗಳು ತಿಳಿಸಿದ್ದಾರೆ. ಅರಣ್ಯ ಇಲಾಖೆ ಮತ್ತು ವಿದ್ಯಾನಗರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ.