ಎಡನೀರಿನ ನೂತನ ಮಠಾಧೀಶರಾಗಿ ದೀಕ್ಷೆಪಡೆದ ಶ್ರೀಸಚ್ಚಿದಾನಂದ ಭಾರತಿಗಳು-ಕಾಂಚಿ ಜಗದ್ಗುರುಗಳಿಂದ ದೀಕ್ಷೆ ಪ್ರಧಾನ
0
ಅಕ್ಟೋಬರ್ 26, 2020
ಕಾಸರಗೋಡು: ಕಾಸರಗೋಡು ಜಿಲ್ಲೆಯ ಎಡನೀರು ಮಠದ ನೂತನ ಮಠಾಧೀಶರಾಗಿ ನಿಯುಕ್ತಿಗೊಂಡಿರುವ ಶ್ರೀಸಚ್ಚಿದಾನಂದ ಭಾರತಿಗಳಿಗೆ ಇಂದು ಕಾಂಚಿಯ ಜಗದ್ಗುರು ಪೀಠದಲ್ಲಿ ಅಧಿಕೃತ ಸನ್ಯಾಸ ದೀಕ್ಷೆ ಸೋಮವಾರ ನೆರವೇರಿತು.
ಭಾನುವಾರದಿಂದಲೇ ಕಾಂಚಿ ಕಾಮಕೋಟಿ ಮಹಾಸಂಸ್ಥಾನದಲ್ಲಿ ವಿವಿಧ ವಿಧಿ ವಿಧಾನಗಳು ಆರಂಭಗೊಂಡು ಗಣಪತಿ ಸಂಪ್ರಾರ್ಥನೆ, ಪುಣ್ಯಾಹ ವಾಚನ, ವಪನ, ಸಂಕಲ್ಪ ಸಹಿತ ಸಾಮವೇದ ಪಾರಾಯಣ, ಭಗವದ್ ಸಂಕೀರ್ತನೆ ಮೊದಲಾದವುಗಳು ನೆರವೇರಿತು.
ಸೋಮವಾರ ಕಾಂಚಿಯ ಜಗದ್ಗುರು ಶ್ರೀಶ್ರೀ ಶಂಕರ ವಿಜಯೇಂದ್ರ ಸರಸ್ವತೀ ಅವರಿಂದ ಶಾಸ್ರ್ತೋಕ್ತವಾಗಿ ದೀಕ್ಷೆ ಸ್ವೀಕರಿಸಿದರು. ಕಾರ್ಯಕ್ರಮದ ಅಂಗವಾಗಿ ಪ್ರಾಥಃಕಾಲದಲ್ಲಿ ಅನುಷ್ಠಾ ಸಹಿತ, ವಿರಜಾ ಹೋಮ,ಪುರುಷಸೂಕ್ತಹೋಮ, ಸನ್ಯಾಸ ದೀಕ್ಷಾ ಇತರ ವಿಧಾನಗಳು, ಗುರುಪೂಜೆ, ಗುರು ಪಾದುಕಾಪೂಜೆ, ಪ್ರಣಮ ಮಂತ್ರೋಪದೇಶ, ಕಾಂಚೀ ಮಠಾಧೀಶರಿಂದ ಮಂಗಳ ಮಂತ್ರಾಕ್ಷತೆಗಳು ನೆರವೇರಿತು.
ಮಂಗಳವಾರ ಬೆಳಿಗ್ಗೆ 11 ರಿಂದ 12ರ ಮಧ್ಯೆ ಸಚ್ಚಿದಾನಂದ ಶ್ರೀಗಳು ಎಡನೀರು ಪುರಪ್ರವೇಶಗೈಯ್ಯಲಿದ್ದು ಬುಧವಾರ ಎಡನೀರು ಮಠಾಧೀಶರಾಗಿ ಪೀಠಾರೋಹಣಗೈಯ್ಯಲಿರುವರು.
ಕೋವಿಡ್ ಮಾನದಂಡಗಳ ಅನುಸಾರ ಭಕ್ತರಿಗೆ ಸೀಮಿತ ಸಂಖ್ಯೆಯಲ್ಲಿ ಪೀಠಾರೋಹಣ ಕಾರ್ಯಕ್ರಮಗಳಿಗೆ ಪ್ರವೇಶ ನೀಡಲಾಗಿದೆ. ವಿವಿಧ ಪ್ರದೇಶಗಳ ಮಠಾಧಿಪತಿಗಳು, ಸಾಧು-ಸಂತರು, ಗಣ್ಯರು ಭಾಗವಹಿಸುವರೆಂದು ಮಠದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.