ಪೆರ್ಲ: ಕೇರಳ ಸರ್ಕಾರದ ಸುಭಿಕ್ಷ ಕೇರಳ ಯೋಜನೆಯನ್ವಯ ಪೆರ್ಲ ಸೇವಾ ಸಹಕಾರಿ ಬ್ಯಾಂಕ್ ವತಿಯಿಂದ ಬಜಕೂಡ್ಲು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಗದ್ದೆಯಲ್ಲಿ ನಡೆಸಲಾದ ಭತ್ತದ ಕೊಯ್ಲು ಉತ್ಸವ ಜರುಗಿತು. ಕಾಸರಗೋಡು ಜಿಲ್ಲಾ ಪಂಚಾಯತಿ ಸದಸ್ಯೆ ಪುಷ್ಪಾ ಅಮೆಕ್ಕಳ ಕೊಯ್ಲು ಉತ್ಸವಕ್ಕೆ ಚಾಲನೆ ನೀಡಿ ಮಾತನಾಡಿ, ಕೃಷಿಯಲ್ಲಿ ಹೆಚ್ಚಾಗಿ ತೊಡಗಿಸಿಕೊಂಡಾಗ ಮಾತ್ರ ಆಹಾರ ಉತ್ಪಾದನೆಯಲ್ಲಿ ಸ್ವಾವಲಂಬಿಗಳಾಗಲು ಸಾಧ್ಯ. ಇಂತಹ ಚಟುವಟಿಕೆಗಳಿಗೆ ಸಹಕಾರಿ ಬ್ಯಾಂಕು ಒಳಗೊಂಡಂತೆ ವಿವಿಧ ಸಂಘಟನೆಗಳು ನೀಡುತ್ತಿರುವ ಸಹಕಾರ ಶ್ಲಾಘನೀಯ ಎಂದು ತಿಳಿಸಿದರು.
ಬ್ಯಾಂಕ್ ಅಧ್ಯಕ್ಷ ಶಶಿಭೂಷಣ ಶಾಸ್ತ್ರಿ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭ ದೇವರಗದ್ದೆಯಲ್ಲಿ ನಡೆಸಲಾಗಿರುವ ಭತ್ತದ ಕೃಷಿಗೆ ಊರವರು ಹಾಗೂ ಸಂಘ ಸಂಸ್ಥೆಗಳು ನೀಡಿರುವ ಸಹಕಾರ ಸ್ಮರಿಸಿದರು. ಉಪಾಧ್ಯಕ್ಷ ರಾಜಾರಾಮ ಬಾಳಿಗ ಪೆರ್ಲ, ಎಣ್ಮಕಜೆ ಗ್ರಾಮ ಪಂಚಾಯತ್ ಸದಸ್ಯ ಪುಟ್ಟಪ್ಪ ಕೆ., ಬ್ಯಾಂಕ್ ಆಡಳಿತ ಮಂಡಳಿ ನಿರ್ದೇಶಕರು, ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು. ಬ್ಯಾಂಕ್ ಕಾರ್ಯದರ್ಶಿ ಪ್ರಭಾಕರ ಕೆ.ಪಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
ಬ್ಯಾಂಕ್ ಸಿಬ್ಬಂದಿಗಳು, ಆಡಳಿತಮಂಡಳಿ ಸದಸ್ಯರು, ಕುಟುಂಬಶ್ರೀ, ಮಹಿಳಾ ಸಂಘ, ಕ್ಲಬ್ ಕಾರ್ಯಕರ್ತರು, ವಿದ್ಯಾರ್ಥಿಗಳು, ಊರವರು ಭತ್ತದ ಕೃಷಿಗೆ ಕೈಜೋಡಿಸಿದ್ದರು. ಪಾಳು ಭೂಮಿಯನ್ನು ಗುರುತಿಸಿ, ಇದನ್ನು ಕೃಷಿ ಯೋಗ್ಯವಾಗಿಸುವುದರ ಜತೆಗೆ ಭತ್ತ ಸಹಿತ ಇತರ ಕೃಷಿ ನಡೆಸುವ ನಿಟ್ಟಿನಲ್ಲಿ ಸರ್ಕಾರ ಸುಭಿಕ್ಷ ಕೇರಳ ಯೋಜನೆ ಜಾರಿಗೊಳಿಸುತ್ತಿದೆ.