ತಿರುವನಂತಪುರಂ, ಅಕ್ಟೋಬರ್ 29: ಕೋವಿಡ್ ಭೀತಿಯ ನಡುವೆಯೇ ಕೇರಳದ ಶಬರಿಮಲೆ ದೇವಾಲಯ ಭಕ್ತರಿಗಾಗಿ ಬಾಗಿಲು ತೆರೆಯಲಿದೆ. ಮಕರ ಸಂಕ್ರಾಂತಿ ಮಂಡಲ ಪೂಜೆ ಸಮಯದಲ್ಲಿ ಅಯ್ಯಪ್ಪ ಸ್ವಾಮಿ ದರ್ಶನಕ್ಕೆ ಹೆಚ್ಚಿನ ಭಕ್ತರು ಆಗಮಿಸುತ್ತಾರೆ.
ನವೆಂಬರ್ 16ರಿಂದ ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಾಲಯಕ್ಕೆ ಭಕ್ತರಿಗೆ ಪ್ರವೇಶ ನೀಡಲಾಗುತ್ತದೆ ಎಂದು ತಿರುವಂಕೂರು ದೇವಸ್ಥಾನ ಮಂಡಳಿ ಹೇಳಿದೆ. ಮೊದಲ ಒಂದು ವಾರಗಳ ಕಾಲ ದಿನಕ್ಕೆ 1000 ಭಕ್ತರಿಗೆ ಮಾತ್ರ ದರ್ಶನಕ್ಕೆ ಅವಕಾಶ ನೀಡಲಾಗಿದೆ.
ಆದರೆ, ವಾರಾಂತ್ಯದಲ್ಲಿ 1000ಕ್ಕಿಂತ ಹೆಚ್ಚಿನ ಭಕ್ತರು ದರ್ಶನ ಮಾಡಲು ಅವಕಾಶ ನೀಡಲಾಗುತ್ತದೆ. ಮಕರ ವಿಳಕ್ಕು, ಮಂಡಳ ವಿಳಕ್ಕು ಸಂದರ್ಭದಲ್ಲಿ 5000 ಭಕ್ತರಿಗೆ ಪ್ರವೇಶ ನೀಡಲಾಗುತ್ತದೆ ಎಂದು ಆಡಳಿತ ಮಂಡಳಿ ಹೇಳಿದೆ.
ಕೋವಿಡ್ ಪರಿಸ್ಥಿತಿ ಹಿನ್ನಲೆಯಲ್ಲಿ ದೇವಾಲಯಕ್ಕೆ ಬರುವ ಭಕ್ತರು 24 ಗಂಟೆ ಹಿಂದಿನ ಕೋವಿಡ್ ನೆಗೆಟಿವ್ ಪ್ರಮಾಣ ಪತ್ರವನ್ನು ತರಬೇಕು. ಸನ್ನಿಧಾನದಲ್ಲಿ ರಾತ್ರಿ ವಾಸ್ತವ್ಯ ಹೂಡುವುದನ್ನು ನಿಷೇಧಿಸಲಾಗಿದೆ ಎಂದು ಆಡಳಿತ ಮಂಡಳಿ ಸ್ಪಷ್ಟಪಡಿಸಿದೆ.