ಕಾಸರಗೋಡು: ಕೃಷಿ ಬೆಳೆಗೆ ಹಾನಿ ಮಾಡುವ, ಕೃಷಿಕರಿಗೆ ಜೀವ ಬೆದರಿಕೆ ತರುವ ಕಾಡುಹಂದಿಗಳಿಗೆ ಗುಂಡಿಕ್ಕುವ ಅನುಮತಿಗಾಗಿ ಸಲ್ಲಿಸಿದ ಅರ್ಜಿಗಳಿಗೆ ಅರಣ್ಯ ಇಲಾಖೆ ಒಪ್ಪಿಗೆ ನೀಡಲಿದೆ ಎಂದು ವಿಭಾಗೀಯ ಅರಣ್ಯ ಅಧಿಕಾರಿ ತಿಳಿಸಿರುವರು.
ಜಿಲ್ಲಾ ಮಟ್ಟದ ಅಭಿವೃಧ್ಧಿ ಸಮಿತಿ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. ಆಯಾ ರೇಂಜ್ ಅಧಿಕಾರಿಗಳಿಗೆ ಅರ್ಜಿ ಸಲ್ಲಿಸಬೇಕು. ಕಾಸರಗೋಡು ಜಿಲ್ಲೆಯಲ್ಲಿ ಕೃಷಿಕರಿಂದ ಈ ಅಗತ್ಯಕ್ಕಾಗಿ ಒಂದೇ ಒಂದು ಅರ್ಜಿ ಲಭಿಸಿಲ್ಲ ಎಂದು ಡಿ.ಎಫ್.ಒ. ಅನೂಪ್ ಕುಮಾರ್ ತಿಳಿಸಿದರು. ಕಾಡುಹಂದಿಗಳಿಗೆ ಗುಂಡಿಕ್ಕುವ ಅರ್ಜಿಗಳಿಗೆ ನಿಬಂಧನೆಗಳಿಗೆ ಅನ್ವಯವಾಗಿ ಮಂಜೂರಾತಿ ನೀಡಲಾಗುವುದು. ಈ ಅನುಮತಿಯ ಕಾಲಾವಧಿ 6 ತಿಂಗಳು ಆಗಿದೆ. ಕಾನೂನು ರೀತ್ಯಾ ಕಾಡುಹಂದಿಗಳಿಗೆ ಗುಂಡಿಕ್ಕಿ ಕೊಲ್ಲುವ ಮಂದಿಗೆ ಒಂದು ಸಾವಿರ ರೂ. ಬಹುಮಾನ ನೀಡಲಾಗುವುದು.
ಜಿಲ್ಲೆಯ ಕರ್ನಾಟಕ ಗಡಿ ಪ್ರದೇಶಗಳ ವನಾಂತರ ಪ್ರದೇಶಗಳಿಂದ ನಾಡಿಗಿಳಿಯುವ ಕಾಡಾನೆಗಳನ್ನು ಮರಳಿ ಕಾಡಿಗೆ ಕಳುಹಿಸುವ ನಿಟ್ಟಿನಲ್ಲಿ ಸಾಕಾನೆಗಳನ್ನು ಕರೆತರಲಾಗುವುದು. ನಾಡಿಗಿಳಿಯುವ ಕಾಡುಮಂಗಗಳ ಹಾವಳಿ ನಿಯಂತ್ರಿಸುವ ನಿಟ್ಟಿನಲ್ಲಿ ಗೂಡುಗಳನ್ನು ಇರಿಸಿ ಅವುಗಳನ್ನು ಹಿಡಿದು ಸಂತಾನಹರಣ ಶಸ್ತ್ರಕ್ರಿಯೆಗೆ ಒಳಪಡಿಸಿ ನಂತರ ಬಿಡುಗಡೆ ಮಾಡಲಾಗುವುದು ಎಂದು ಡಿ.ಎಫ್.ಒ. ತಿಳಿಸಿದರು.
ಹಾನಿಗೀಡಾದ ಪ್ರದೇಶಗಳಿಗೆ ಭೇಟಟಿ ನೀಡಿರುವ ಪ್ರಧಾನ ವನ್ಯಜೀವಿ ವಾರ್ಡನ್ ಅವರಿಗೆ ಕಾಸರಗೋಡು ಜಿಲ್ಲೆಯಲ್ಲಿ ವನ್ಯಮೃಗಗಳ ಹಾವಳಿಯಿರುವುದು ಮನವರಿಕೆಯಾಗಿದೆ. ಕಾಡಾನೆಗಳನ್ನು ಮರಳಿ ಅರಣ್ಯಕ್ಕೆ ಕಳುಹುವ ನಿಟ್ಟಿನಲ್ಲಿ ಪರಿಣತರಾದ 8 ಮಮದಿಯನ್ನು ಆರಲಂ ನಿಂದ ಕರೆತರಲಾಗಿದೆ. 2008ರ ವನ್ಯಜೀವಿ ಗಣತಿ ಪ್ರಕಾರ ಕಾಸರಗೋಡು ಜಿಲ್ಲೆಯಲ್ಲಿ ಯಾವುದೇ ಕಾಡಾನೆಗಳು ಇಲ್ಲ. ಆದರೆ ಜಿಲ್ಲೆಯಲ್ಲಿ 8 ಆನೆಗಳು ತಂಗಿರುವುದು ಖಚಿತವಾಗಿದೆ. ಇವು ಕರ್ನಾಟಕದ ವನಾಂತರ ಪ್ರದೇಶಗಳಿಂದ ಆಹಾರ ಹುಡುಕುತ್ತಾ ಇಲ್ಲಿಗೆ ಬಂದುವು. ಕರ್ನಾಟಕ ಅರಣ್ಯ ಇಲಾಖೆಯ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿ ಅವುಗಳನ್ನು ಕಾಡಿಗೆ ಮರಳಿಸುವ ಕ್ರಮ ಕೈಗೊಳ್ಳಲಾಗುವುದು ಎಂದು ಸಭೆಯಲ್ಲಿ ತಿಳಿಸಲಾಯಿತು. ಶಾಸಕ ಎಂ.ರಾಜಗೋಪಾಲನ್ ಅವರ ಆಗ್ರಹದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗುವುದು.
ನ.5ರಂದು ವೀಡಿಯೋ ಕಾನ್ ಫೆರೆನ್ಸ್ ಮೂಲಕ ಜನಪ್ರತಿನಿಧಿಗಳ ಮತ್ತು ಅಧಿಕಾರಿಗಳ ಸಭೆ ನಡೆಸಲು ತೀರ್ಮಾನಿಸಲಾಗಿದೆ.