ಕೊಚ್ಚಿ: ಲೈಫ್ ಮಿಷನ್ ತನಿಖೆಗೆ ರಾಜ್ಯ ಉಚ್ಚ ನ್ಯಾಯಾಲಯ ಎರಡು ತಿಂಗಳುಗಳಿಗೆ ತಾತ್ಕಾಲಿಕ ಸ್ಟೇ ನೀಡಿದೆ. ರಾಜ್ಯ ಸರ್ಕಾರದ ಮನವಿಯಂತೆ ಉಚ್ಚ ನ್ಯಾಯಾಲಯ ಈ ನಿರ್ಣಯ ಕೈಗೊಂಡಿತು.
ವಡಕಂಚೇರಿ ಲೈಫ್ ಮಿಷನ್ ಕುರಿತ ಸಿಬಿಐ ತನಿಖೆಯನ್ನು ರದ್ದುಗೊಳಿಸುವಂತೆ ಕೋರಿ ರಾಜ್ಯ ಸರ್ಕಾರ ಮತ್ತು ಯುನಿಟಾಕ್ ಹೈಕೋರ್ಟ್‍ನಲ್ಲಿ ಅರ್ಜಿ ಸಲ್ಲಿಸಿದ್ದವು. ನ್ಯಾಯಮೂರ್ತಿ ವಿ.ಜಿ.ಅರುಣ್ ಅವರ ಏಕ ಪೀಠವು ನಿನ್ನೆ ತಾತ್ಕಾಲಿಕ ಸ್ಟೇ ತೀರ್ಪು ನೀಡಿತು.
ವಿದೇಶಿ ಕೊಡುಗೆ ನಿಯಂತ್ರಣ ಕಾಯ್ದೆ (ಎಫ್‍ಸಿಆರ್‍ಎ) ಅನ್ವಯವಾಗುತ್ತಿದೆ ಎಂಬುದನ್ನು ಖಾತ್ರಿಪಡಿಸಲು ಸಿಬಿಐಗೆ ಸಾಧ್ಯವಾಗಲಿಲ್ಲ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ. ಆದರೆ, ಎಫ್‍ಐಆರ್ ರದ್ದುಪಡಿಸಬೇಕು ಎಂಬ ಸರ್ಕಾರದ ಬೇಡಿಕೆಯನ್ನು ನ್ಯಾಯಾಲಯ ತಳ್ಳಿ ಹಾಕಿತು. ಅರ್ಜಿಗಳನ್ನು ನೇರವಾಗಿ ಆಲಿಸಲಾಗುವುದು. ಕಳೆದ ವಾರ ನ್ಯಾಯಮೂರ್ತಿ ವಿ.ಜಿ.ಅರುಣ್ ಅವರು ಎರಡೂ ಕಡೆಯಿಂದ ವಾದಗಳನ್ನು ಕೇಳಿದ್ದರು.
ಎಫ್‍ಸಿಆರ್‍ಎ ನಿಯಮಗಳು ಲೈಫ್ ಮಿಷನ್‍ಗೆ ಅನ್ವಯಿಸುವುದಿಲ್ಲ ಮತ್ತು ವಹಿವಾಟು ಯುನಿಟಾಕ್ ಮತ್ತು ರೆಡ್ ಕ್ರೆಸೆಂಟ್ ನಡುವೆ ಇದೆ ಹಾಗೂ ಸರ್ಕಾರಕ್ಕೆ ಯಾವುದೇ ಸಂಬಂಧವಿಲ್ಲ ಎಂದು ಸರ್ಕಾರ ವಾದಿಸಿದೆ. ರಾಜ್ಯ ಸರ್ಕಾರದ ಅಥವಾ ಹೈಕೋರ್ಟ್‍ನ ನಿರ್ದೇಶನವಿಲ್ಲದೆ ಈ ಪ್ರಕರಣದ ತನಿಖೆ ನಡೆಸಲು ಸಿಬಿಐಗೆ ಯಾವುದೇ ನ್ಯಾಯವ್ಯಾಪ್ತಿ ಇಲ್ಲ ಎಂದು ಸರ್ಕಾರ ನ್ಯಾಯಾಲಯಕ್ಕೆ ತಿಳಿಸಿದೆ.
'ಲೈಫ್ ಮಿಷನ್ ಯುನಿಟಾಕ್‍ಗೆ ಫ್ಲಾಟ್ ನಿರ್ಮಿಸಲು ಮಾತ್ರ ಜಾಗ ನೀಡಿದೆ. ರೆಡ್ ಕ್ರೆಸೆಂಟ್ ಹಣ ಪಾವತಿಸಿರುವುದು ಯುನಿಟಾಕ್ ಗೆ ಆಗಿದೆ. ಆದ್ದರಿಂದ, ಎಫ್‍ಸಿಆರ್‍ಎ ನಿಯಮಗಳು ವ್ಯವಹಾರಕ್ಕೆ ಅನ್ವಯಿಸುವುದಿಲ್ಲ. ಈ ಆರೋಪಗಳು ರಾಜಕೀಯ ಪ್ರೇರಿತವಾಗಿವೆ ಎಂದು ಸರ್ಕಾರ ಹೇಳಿಕೊಂಡಿದೆ.
ಆದರೆ, ಕೇಂದ್ರ ಸರ್ಕಾರದ ಅನುಮತಿಯಿಲ್ಲದೆ ರಾಜ್ಯ ಸರ್ಕಾರವು ಲೈಫ್ ಯೋಜನೆಗೆ ವಿದೇಶಿ ನೆರವು ಪಡೆದಿದೆ ಮತ್ತು ಈ ನಿಟ್ಟಿನಲ್ಲಿ ಪಿತೂರಿ ಮತ್ತು ಭ್ರಷ್ಟಾಚಾರ ನಡೆಸಿದೆ ಎಂದು ಸಿಬಿಐ ನ್ಯಾಯಾಲಯಕ್ಕೆ ತಿಳಿಸಿತ್ತು. ಕೇಂದ್ರ ಸರ್ಕಾರದ ನಿಯಮಗಳನ್ನು ಉಲ್ಲಂಘಿಸಿ ಲೈಫ್ ಯೋಜನೆಗೆ ವಿದೇಶಿ ನೆರವು ಸ್ವೀಕರಿಸಿದ ಆರೋಪದ ಮೇಲೆ ಸಿಬಿಐ ಪ್ರಕರಣ ದಾಖಲಿಸಿದೆ.