ನವದೆಹಲಿ: '2021ರ ಫೆಬ್ರುವರಿ ಅಂತ್ಯದ ವೇಳೆಗೆ ದೇಶದಲ್ಲಿ ಕೋವಿಡ್ ಹತೋಟಿಗೆ ಬರಲಿದೆ' ಎಂದು ಕೋವಿಡ್ ಹರಡುವಿಕೆಗೆ ಸಂಬಂಧಿಸಿ ತಜ್ಞರ ಸಮಿತಿಯು ನೀಡಿದ್ದ ವರದಿಗೆ ಕೆಲವು ವಿಜ್ಞಾನಿಗಳಿಂದ ತೀವ್ರ ಆಕ್ಷೇಪ ವ್ಯಕ್ತವಾಗಿದೆ. ಕೋವಿಡ್ ನಿಯಂತ್ರಣಕ್ಕೆ ಬರುತ್ತದೆ ಎಂದು ಅಂದಾಜಿಸಲು ಸಮಿತಿಯು ಆಧರಿಸಿದ ಗಣಿತ ಶಾಸ್ತ್ರೀಯ ಮಾದರಿ ಬಗ್ಗೆ ಹಾಗೂ ಲಾಕ್‌ಡೌನ್‌ನಿಂದ ಕೋವಿಡ್ ನಿಯಂತ್ರಣಕ್ಕೆ ಬಂದಿದೆ ಎಂದು ವರದಿಯಲ್ಲಿ ಹೇಳಿರುವುದನ್ನು ವಿಜ್ಞಾನಿಗಳು ಪ್ರಶ್ನಿಸಿದ್ದಾರೆ.
'ಹೆಚ್ಚು ವಿವರಗಳಿಂದ ಕೂಡಿರುವ ಮತ್ತು ವಿಸ್ತೃತವಾದ ಗಣಿತೀಯ ಮಾದರಿಗಳು ಕೋವಿಡ್ ನಿಯಂತ್ರಣದ ಬಗ್ಗೆ ನೀಡಿರುವ ಅಂದಾಜುಗಳೇ ಸಂಶಯಾಸ್ಪದವಾಗಿವೆ. ಈ ವರದಿಯಂತೂ ಕಚ್ಚಾರೂಪದಲ್ಲಿದೆ' ಎಂದು ಚೆನ್ನೈನ ಇನ್‌ಸ್ಟಿಟ್ಯೂಟ್ ಆಫ್ ಮ್ಯಾಥಮೆಟಿಕಲ್ ಸೈನ್ಸ್‌ನ (ಐಎಂಎಸ್) ಪ್ರಾಧ್ಯಾಪಕರೊಬ್ಬರು ಟೀಕಿಸಿದ್ದಾರೆ.
ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ಪ್ರಧಾನ ವೈಜ್ಞಾನಿಕ ಸಲಹೆಗಾರರ ಕಚೇರಿಯ ಮೇಲುಸ್ತುವಾರಿಯಲ್ಲಿ ತಜ್ಞರ ಸಮಿತಿಯು ಈ ಅಧ್ಯಯನ ನಡೆಸಿದೆ. ಹೀಗಾಗಿ ಸಮಿತಿಯ ವರದಿಯ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿರುವ ವಿಜ್ಞಾನಿಗಳು ತಮ್ಮ ಹೆಸರನ್ನು ಬಹಿರಂಗಪಡಿಸದೆ ಇರಲು ಕೋರಿದ್ದಾರೆ.
ಭಾರತೀಯ ವೈದ್ಯಕೀಯ ಸಂಶೋಧನಾ ಪರಿಷತ್ತಿನ ಬಳಿ ಲಭ್ಯವಿದ್ದ ದತ್ತಾಂಶವನ್ನು ಬಳಸಿಕೊಳ್ಳದೆ, ತಜ್ಞರ ಸಮಿತಿಯು 'ಸೂಪರ್ ಮಾಡೆಲ್' ಎಂದು ಹೆಸರಿಸಲಾದ ಗಣಿತ ಶಾಸ್ತ್ರೀಯ ಮಾದರಿಯ ಆಧಾರದಲ್ಲಿ ಈ ವರದಿಯನ್ನು ಸಿದ್ಧಪಡಿಸಿದೆ.
ಕೋವಿಡ್‌ಗೆ ಸಂಬಂಧಿಸಿದಂತೆ ಮಾರ್ಚ್‌ನಲ್ಲಿ ಯಾವುದೇ ದತ್ತಾಂಶ ಲಭ್ಯವಿರಲಿಲ್ಲ. ಆಗ ಅತ್ಯಂತ ಸರಳ ಮಾದರಿಯನ್ನು ಅನುಸರಿಸಿ, ಅಧ್ಯಯನ ನಡೆಸಲಾಗಿತ್ತು. ಆದರೆ ಈಗ ಸಾಕಷ್ಟು ದತ್ತಾಂಶ ಲಭ್ಯವಿದೆ. ಅಕ್ಟೋಬರ್‌ನಲ್ಲಿ ಲಭ್ಯವಿರುವ ವಾಸ್ತವ ದತ್ತಾಂಶವನ್ನು ಬಳಸಿಕೊಳ್ಳದೆ ಅಧ್ಯಯನ ನಡೆಸಿದ್ದು ಅಕ್ಷಮ್ಯ ಎಂದು ಹಲವು ವಿಜ್ಞಾನಿಗಳು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಲಾಕ್‌ಡೌನ್ ಸಮರ್ಥನೆಗೆ ಆಕ್ಷೇಪ: ಮಾರ್ಚ್‌ನಲ್ಲಿ ಸರ್ಕಾರ ತೆಗೆದುಕೊಂಡ ಲಾಕ್‌ಡೌನ್ ನಿರ್ಧಾರ ಸಮಯೋಚಿತವಾಗಿತ್ತು. ಇದರಿಂದ ಕೋವಿಡ್ ಹರಡುವಿಕೆ ನಿಯಂತ್ರಣಕ್ಕೆ ಬಂತು ಎಂದು ತಜ್ಞರ ಸಮಿತಿ ಹೇಳಿರುವುದಕ್ಕೂ ಆಕ್ಷೇಪ ವ್ಯಕ್ತವಾಗಿದೆ. ಸರ್ಕಾರ ತೆಗೆದುಕೊಂಡ ನಿರ್ಧಾರವನ್ನು ಸಮರ್ಥಿಸಿಕೊಳ್ಳುವ ಉದ್ದೇಶದಿಂದ ತಜ್ಞರ ಸಮಿತಿಯು ಅತ್ಯಂತ ಸರಳ ಗಣಿತ ಶಾಸ್ತ್ರೀಯ ಮಾದರಿಯನ್ನು ಅನುಸರಿಸಿ ಈ ವರದಿಯನ್ನು ಸಿದ್ಧಪಡಿಸಿದೆ ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ.
ಉತ್ತರ ಪ್ರದೇಶ ಮತ್ತು ಬಿಹಾರಕ್ಕೆ ವಲಸೆ ಕಾರ್ಮಿಕರು ಹಿಂತಿರುಗುವುದನ್ನು ತಡೆದದ್ದರಿಂದ ಆ ರಾಜ್ಯಗಳಲ್ಲಿ ಸೋಂಕು ಹರಡುವುದು ನಿಯಂತ್ರಣಕ್ಕೆ ಬಂತು ಎಂದು ತಜ್ಞರ ಸಮಿತಿ ಹೇಳಿತ್ತು. ಈ ಹೇಳಿಕೆಯನ್ನೂ ವಿಜ್ಞಾನಿಗಳು ಪ್ರಶ್ನಿಸಿದ್ದಾರೆ.
'ವಲಸೆ ಕಾರ್ಮಿಕರು ತಮ್ಮ ರಾಜ್ಯಗಳಿಗೆ ಹಿಂತಿರುಗುವುದನ್ನು ತಡೆದು, ವಿಳಂಬ ಮಾಡಲಾಯಿತು. ಆ ಕಾರ್ಮಿಕರು ತಮ್ಮ ರಾಜ್ಯಗಳಿಗೆ ತಡವಾಗಿ ಹಿಂತಿರುಗಿದ್ದರಿಂದ, ಅಲ್ಲಿ ಸೋಂಕು ವ್ಯಾಪಕವಾಗಿ ಹರಡಲು ಕಾರಣವಾಯಿತು' ಎಂದು ಮತ್ತೊಬ್ಬ ವಿಜ್ಞಾನಿ ಹೇಳಿದ್ದಾರೆ.
'ಫೆಬ್ರುವರಿಗೆ ಶೇ 50ರಷ್ಟು ಜನರಿಗೆ ಕೋವಿಡ್'
'2021ರ ಫೆಬ್ರುವರಿ ಅಂತ್ಯದ ವೇಳೆಗೆ ದೇಶದ ಒಟ್ಟು ಜನಸಂಖ್ಯೆಯಲ್ಲಿ ಅರ್ಧದಷ್ಟು ಜನರಿಗೆ ಕೊರೊನಾ ಸೋಂಕು ತಗಲುವ ಸಾಧ್ಯತೆ ಇದೆ' ಎಂದು ತಜ್ಞರ ಸಮಿತಿಯ ಸದಸ್ಯ ಮಣೀಂದ್ರ ಅಗರ್ವಾಲ್ ಹೇಳಿದ್ದಾರೆ.
ಲಾಕ್‌ಡೌನ್ ಸಮರ್ಥಿಸಿಕೊಂಡ ಪ್ರಧಾನಿ
'ಕೋವಿಡ್ ಪ್ರಕರಣಗಳಲ್ಲಿ ಇಳಿಕೆಯಾಗಿದೆ ಮತ್ತು ಮುಂದಿನ ಫೆಬ್ರುವರಿ ಹೊತ್ತಿಗೆ ಸೋಂಕು ನಿಯಂತ್ರಣಕ್ಕೆ ಬರಬಹುದು ಎಂಬ ಭರವಸೆ ಇದೆ. ಭಾರತವು ಆರಂಭದಲ್ಲಿಯೇ ಲಾಕ್‌ಡೌನ್ ಮಾಡಿದ್ದು ಇದಕ್ಕೆ ಕಾರಣ' ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
'ಪ್ರತೀ ದಿನ ವರದಿಯಾಗುತ್ತಿರುವ ಪ್ರಕರಣಗಳ ಸಂಖ್ಯೆ ಮತ್ತು ಏರಿಕೆ ಪ್ರಮಾಣಗಳೆರಡೂ ಕಡಿಮೆ ಆಗಿರುವುದನ್ನು ನಾವು ಇಂದು ನೋಡುತ್ತಿದ್ದೇವೆ. ಅತಿ ಹೆಚ್ಚು ಗುಣಮುಖ ಪ್ರಮಾಣ ಹೊಂದಿರುವ ದೇಶಗಳಲ್ಲಿ ಭಾರತವೂ ಒಂದು. ಆರಂಭದಲ್ಲಿಯೇ ಲಾಕ್‌ಡೌನ್ ಮಾಡಿದ್ದು, ಮಾಸ್ಕ್ ಧರಿಸುವಂತೆ ಜಾಗೃತಿ ಮೂಡಿಸಿದ್ದು ಇದಕ್ಕೆ ಕಾರಣ' ಎಂದು ಮೋದಿ ಪ್ರತಿಪಾದಿಸಿದ್ದಾರೆ.