ನವದೆಹೆಲಿ: ಜಿಎಸ್ ಟಿ ಪರಿಹಾರ ಸಂಬಂಧ ನಡೆದ ಸಭೆಯಲ್ಲಿ ಒಮ್ಮತದ ನಿರ್ಧಾರಕ್ಕೆ ಬರಲು ಸಾಧ್ಯವಾಗಿಲ್ಲ ಎಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
ಜಿಎಸ್‌ಟಿ ಅನುಷ್ಠಾನ ಹಾಗೂ ಕೋವಿಡ್ ಬಿಕ್ಕಟ್ಟಿನ ಪರಿಣಾಮ ರಾಜ್ಯಗಳಿಗೆ ಉಂಟಾಗಿರುವ ಜಿಎಸ್‌ಟಿ ನಷ್ಟಕ್ಕೆ ತಾನೇ ಸಾಲ ಪಡೆದು ಪರಿಹಾರ ವಿತರಿಸಲು ಕೇಂದ್ರ ಸರ್ಕಾರ ನಿರಾಕರಿಸಿದೆ. ಕೇಂದ್ರ ಸರಕಾರ ಸಾಲ ತೆಗೆದುಕೊಳ್ಳಲು ಸಾಧ್ಯವಿಲ್ಲ, ರಾಜ್ಯಗಳು ಸಾಲ ಪಡೆದುಕೊಳ್ಳಬೇಕು ಎಂದು ಜಿಎಸ್‌ಟಿ ಮಂಡಳಿಯ ಸಭೆಯಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
ದೆಹಲಿಯಲ್ಲಿ ನಡೆದ ಜಿಎಸ್ ಟಿ ಸಭೆ ಬಳಿಕ ಮಾತನಾಡಿದ ಅವರು, 'ಜಿಎಸ್‌ಟಿ ನಷ್ಟ ಪರಿಹಾರಕ್ಕೆ ಸಂಬಂಧಿಸಿ ಯಾವುದೇ ವಿವಾದ ಉಂಟಾಗಿಲ್ಲ. ಕೇವಲ ಅಭಿಪ್ರಾಯ ವ್ಯತ್ಯಾಸವಾಗಿದೆ. ಕೇಂದ್ರ ಸರ್ಕಾರ ಜಿಎಸ್‌ಟಿ ನಷ್ಟ ಪರಿಹಾರಕ್ಕೆ ಸಂಬಂಧಿಸಿ ರಾಜ್ಯಗಳೆದುರು ಎರಡು ಆಯ್ಕೆಗಳನ್ನು ಮುಂದಿಟ್ಟಿತ್ತು. ಮೊದಲನೆಯ ಆಯ್ಕೆಯಲ್ಲಿ ಕೇಂದ್ರ ಸರ್ಕಾರ ಜಿಎಸ್‌ಟಿ ಅನುಷ್ಠಾನ ಜಾರಿಯಲ್ಲಿ ಉಂಟಾಗಿರುವ ನಷ್ಟ ಭರಿಸಲು ರಾಜ್ಯಗಳು 97 ಸಾವಿರ ಕೋಟಿ ರೂ. ಸಾಲ ತೆಗೆದುಕೊಳ್ಳಬಹುದು ಮತ್ತು ಎರಡನೆಯ ಆಯ್ಕೆಯಲ್ಲಿ ಅನುಷ್ಠಾನ ಹಾಗೂ ಕೋವಿಡ್ ಪರಿಣಾಮದ ನಷ್ಟಕ್ಕೆ ಒಟ್ಟಾರೆ 2.35 ಲಕ್ಷ ಕೋಟಿ ರೂ. ಸಾಲ ಪಡೆಯಬಹುದು. ಭವಿಷ್ಯದಲ್ಲಿ ಸೆಸ್ ಮೂಲಕ ಸಂಗ್ರಹವಾಗುವ ಹಣದಲ್ಲಿ ರಾಜ್ಯಗಳಿಗೆ ಸಾಲದ ನಿರ್ವಹಣೆಗೆ ಭರಿಸಲಾಗುವುದು ಎಂದು ಹೇಳಿತ್ತು.
ಈ ನಿಟ್ಟಿನಲ್ಲಿ ಜಿಎಸ್‌ಟಿ ಸೆಸ್ ಸಂಗ್ರಹವನ್ನು 2022ರ ಜೂನ್ 30ರಿಂದಾಚೆಗೆಯೂ ಕೇಂದ್ರ ಸರ್ಕಾರ ವಿಸ್ತರಿಸಿದೆ. ಎರಡನೇ ಆಯ್ಕೆ ಪಡೆಯುವ ರಾಜ್ಯ ಸರ್ಕಾರಗಳಿಗೆ ಸಾಲದ ಅಸಲಿಗೆ ಮಾತ್ರ ಸೆಸ್ ಹಣ ಸಿಗಲಿದೆ. ಬಡ್ಡಿಯನ್ನು ರಾಜ್ಯಗಳೇ ಪಾವತಿಸಬೇಕಾಗುತ್ತದೆ. ಆದರೆ ಪ್ರತಿಪಕ್ಷ ಆಡಳಿತದಲ್ಲಿರುವ ರಾಜ್ಯ ಸರ್ಕಾರಗಳು ಅದರೆ ಬಿಜೆಪಿಯೇತರ ಸರ್ಕಾರಗಳು ಈ ಪ್ರಸ್ತಾಪವನ್ನು ವಿರೋಧಿಸಿವೆ ಎನ್ನಲಾಗಿದೆ. ಹೀಗಾಗಿ ಇಂದಿನ ಜಿಎಸ್ ಟಿ ಮಂಡಳಿ ಸಭೆ ಯಾವುದೇ ನಿರ್ಧಾರಕ್ಕೆ ಬರುವಲ್ಲಿ ವಿಫಲವಾಗಿದೆ.