ಕಾಸರಗೋಡು: ಕೋವಿಡ್ ಸೋಂಕು ಬಾಧಿಸಿ ನಿವೃತ್ತ ವೈದ್ಯರೊಬ್ಬರು ಮೃತಪಟ್ಟಿರುವರು. ಕಾಸರಗೋಡು ಜನರಲ್ ಆಸ್ಪತ್ರೆಯ ನಿವೃತ್ತ ಶಿಶುವೈದ್ಯ ಡಾ.ಸತೀಶ್(66) ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ರಾಜ್ಯದಲ್ಲಿ ಕೋವಿಡ್‍ನಿಂದ ಸಾಯುವ ಎರಡನೇ ವೈದ್ಯರು ಇವರಾಗಿದ್ದಾರೆ. ಸರ್ಕಾರಿ ಸೇವೆಯಿಂದ ನಿವೃತ್ತಿಯಾದ ಬಳಿಕ ಅವರು ಕಾಸರಗೋಡಿನಲ್ಲಿ ಖಾಸಗಿ ಕ್ಲಿನಿಕ್ ನಡೆಸುತ್ತಿದ್ದರು. ಐದು ದಿನಗಳಿಂದ ಕೆಮ್ಮು ಮತ್ತು ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಅವರು ಮನೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಮಂಗಳವಾರ ಬೆಳಿಗ್ಗೆ ಅವರು ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ಟ್ರುನಾಟ್ ಪರೀಕ್ಷೆಯಲ್ಲಿ ಕೋವಿಡ್ ಬಾಧಿಸಿರುವುದು ದೃಢಪಡಿಸಲಾಗಿದೆ. ವೈದ್ಯರ ನಿಧನಕ್ಕೆ ಕಾಸರಗೋಡು ಐಎಂಎ ಅಧ್ಯಕ್ಷ ಡಾ. ಬಿ ನಾರಾಯಣ ನಾಯಕ್, ಕಾರ್ಯದರ್ಶಿ ಡಾ. ರಾಕೇಶ್ ಮತ್ತು ಐಎಪಿ ಅಧ್ಯಕ್ಷ ಜಿತೇಂದ್ರ ರಾಯ್ ಮತ್ತು ಕಾರ್ಯದರ್ಶಿ ಗೋಪಾಲಕೃಷ್ಣ ಸಂತಾಪ ಸೂಚಿಸಿದ್ದಾರೆ. ಕೋವಿಡ್ ನಿಯಮಾನುಸಾರ ಶವವನ್ನು ಬುಧವಾರ ಅಂತ್ಯಕ್ರಿಯೆ ಮಾಡಲಾಯಿತು.
ಬುಧವಾರ ಇವರ ಸಾವಿಗೆ ಕೋವಿಡ್ ಕಾರಣದಿಂದ ಎಂದು ದೃಢಪಡಿಸಲಾಗಿದ್ದು ಈ ಮೂಲಕ ನಿನ್ನೆಯೊಂದೇ ದಿನ ಜಿಲ್ಲೆಯಲ್ಲಿ ಐವರ ಸಾವಿಗೆ ಸೋಂಕು ಬಾಧೆ ಕಾರಣವೆಂದು ಆರೋಗ್ಯ ಇಲಾಖೆ ತಿಳಿಸಿದೆ. ಅಜಾನೂರು ಪಂಚಾಯತ್ ನ ಅಬ್ದುಲ್ ರಹಮಾನ್(76), ಕಾಸರಗೋಡು ನಗರಸಭೆಯ ಶಾಂಭವಿ(64), ಡಾ. ಸತೀಶ್(66), ಕುತ್ತಿಕೋಲು ಪಂಚಾಯತ್ ನ ಚೋಮು(63), ಪಳ್ಳಿಕ್ಕರೆ ಪಂಚಾಯತ್ ನ ರುಖಿಯಾ(51) ಕೋವಿಡ್ ನಿಂದ ಮೃತಪಟ್ಟವರಾಗಿದ್ದಾರೆ. ಕಾಸರಗೋಡು ಜಿಲ್ಲೆಯಲ್ಲಿ ಕೋವಿಡ್ ಸಂಬಂಧ ಈ ವರೆಗೆ ಒಟ್ಟು 167 ಮಂದಿ ಮೃತಪಟ್ಟಿದ್ದಾರೆ.
ಮೃತರಾದ ವೈದ್ಯ ಡಾ.ಸತೀಶ್ ಅವರು ಪತ್ನಿ ಡಾ.ನಯನ, ಪುತ್ರ ಸಿದ್ದಾರ್ಥ(ಇಂಜಿನಿಯರ್-ಯುಎಇ), ಸುಶ್ಮಿತ(ಇಂಜಿನಿಯರ್) ಸಹತ ಅಪಾರ ಬಂಧುಗಳನ್ನು ಅಗಲಿದ್ದಾರೆ.