ತಿರುವನಂತಪುರ: ಕೇರಳ ಸರ್ಕಾರದ ವಸತಿ ನಿರ್ಮಾಣ ಯೋಜನೆ ಲೈಫ್ ಮಿಷನ್ ಭ್ರಷ್ಟಾಚಾರದ ವಿರುದ್ಧ ಸಿಬಿಐ ತನಿಖೆ ಮುಂದುವರಿಸಲು ರಾಜ್ಯ ಹೈಕೋರ್ಟು ಹಸಿರುನಿಶಾನೆ ತೋರಿಸಿದೆ. ಲೈಫ್ ಮಿಶನ್ ವಿರುದ್ಧದ ಸಿಬಿಐ ತನಿಖೆ ರದ್ದುಪಡಿಸುವಂತೆ ರಾಜ್ಯ ಸರ್ಕಾರ ಸಲ್ಲಿಸಿದ್ದ ಅರ್ಜಿಯ ಬಗ್ಗೆ ಮಧ್ಯಂತರ ಆದೇಶ ನೀಡಲು ಹೈಕೋರ್ಟು ಮುಂದಾಗದಿರುವುದೂ ಸರ್ಕಾರಕ್ಕೆ ಮುಖಭಂಗವಾಗಿದೆ.
ಸರ್ಕಾರದ ಪರವಾಗಿ ಲೈಫ್‍ಮಿಶನ್ ಸಿಇಓ ನ್ಯಾಯಾಲಯಕ್ಕೆ ಹಾಜರಾಗಿದ್ದರು. ಜಸ್ಟಿಸ್ ವಿ.ಜಿ ಅರುಣ್ ನೇತೃತ್ವದ ಪೀಠ ಅರ್ಜಿ ಪರಿಗಣಿಸುತ್ತಿದ್ದು, ವಿಚಾರಣೆ ಅ.8ಕ್ಕೆ ಮುಂದೂಡಲಾಗಿದೆ.
ಕೇಂದ್ರ ಸರ್ಕಾರದ ಅನುಮತಿಯಿಲ್ಲದೆ ವಿದೇಶದಿಂದ ಹಣ ಪಡೆದಿದ್ದು, ಭ್ರಷ್ಟಾಷಾರ ನಡೆದಿರುವುದು ಮೇಲ್ನೋಟಕ್ಕೆ ಸಾಬೀತಾಗಿರುವುದಾಗಿ ಕಾನೂನು ತಜ್ಞರೂ ತಿಳಿಸಿದ್ದಾರೆ. ವಿದೇಶಿ ದೇಣಿಗೆ ನಿಯಂತ್ರಣ ಕಾನೂನು(ಎಫ್‍ಸಿಆರ್‍ಎ)ಪ್ರಕಾರ ಕಾನೂನು ಉಲ್ಲಂಘನೆಯಾಗಿರುವುದನ್ನು ಸಿಬಿಐ ತನಿಖೆಯಿಂದ ಪತ್ತೆಹಚ್ಚಲಿದೆ. ಕಾನೂನು ಪ್ರಕಾರ ಒಂದು ಕೋಟಿಗಿಂತ ಹೆಚ್ಚಿನ ಮೊತ್ತವನ್ನು ಕೇಂದ್ರದ ಅನುಮತಿಯಿಲ್ಲದೆ ಪಡೆದಲ್ಲಿ ಐದು ವರ್ಷಗಳ ವರೆಗೆ ಜೈಲು ಶಿಕ್ಷೆ ಮತ್ತು ದಂಡ ವಿಧಿಸಲು ಕಾನೂನಿನಲ್ಲಿ ಅವಕಾಶವಿದೆ.
ಲೈಫ್ ಮಿಶನ್‍ನ 20.5ಕೋಟಿ ರೂ. ಮೊತ್ತದ ಒಟ್ಟು ಯೋಜನೆಯಲ್ಲಿ ಒಂಬತ್ತು ಕೋಟಿ ರೂ. ಮೊತ್ತದ ಭ್ರಷ್ಟಾಚಾರ ನಡೆದಿದ್ದು, ಮುಖ್ಯಮಂತ್ರಿ, ಸ್ಥಳೀಯಾಡಳಿತ ಖಾತೆ ಸಚಿವ, ಲೈಫ್ ಮಿಶನ್ ಹಾಲಿ ಸಿಇಓ, ಮಾಜಿ ಸಿಇಓ, ಚಿನ್ನ ಕಳ್ಳಸಾಗಾಟ ಪ್ರಕರಣದ ಆರೋಪಿಗಳಾದ ಸ್ವಪ್ನಾ ಸುರೇಶ್, ಸರಿತಾ, ಸಂದೀಪ್, ಯುನಿಟೆಕ್ ಎಂಡಿ ವಿರುದ್ಧ ಕೇಸು ದಾಖಲಿಸಿ ತನಿಖೆ ನಡೆಸುವಂತೆ ಶಾಸಕ ಅನಿಲ್ ಅಕ್ಕರ ಅವರು ಸಿಬಿಐ ಎಸ್‍ಪಿಗೆ ದೂರು ಸಲ್ಲಿಸಿದ್ದರು.