ನವದೆಹಲಿ: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ನೂತನ ಅಧ್ಯಕ್ಷರನ್ನಾಗಿ ಹಿರಿಯ ಬ್ಯಾಂಕರ್ ದಿನೇಶ್ ಕುಮಾರ್ ಖರಾ ಅವರನ್ನು ನೇಮಿಸಿ ಸರ್ಕಾರ ಆದೇಶ ಹೊರಡಿಸಿದೆ.
ರಜನೀಶ್ ಕುಮಾರ್ ತಮ್ಮ ಮೂರು ವರ್ಷಗಳ ಸೇವೆಯನ್ನು ಪೂರ್ಣಗೊಳಿಸಿದ ಹಿನ್ನೆಲೆಯಲ್ಲಿ ನೂತನ ಅಧ್ಯಕ್ಷರ ನೇಮಕ ಮಾಡಲಾಯಿತು. ಕೇಂದ್ರ ಸರ್ಕಾರವು ಮೂರು ವರ್ಷಗಳ ಅವಧಿಗೆ ದಿನೇಶ್ ಕುಮಾರ್ ಅವರನ್ನು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಅಧ್ಯಕ್ಷರನ್ನಾಗಿ ನೇಮಿಸಿದೆ.
ಈ ಅವಧಿಯು 2020ರ ಅಕ್ಟೋಬರ್ 7 ರಿಂದ ಅಥವಾ ಹುದ್ದೆಯ ಉಸ್ತುವಾರಿ ವಹಿಸಿಕೊಂಡ ದಿನಾಂಕದಿಂದ ಮುಂದಿನ ಆದೇಶದವರೆಗೆ ಇರುತ್ತದೆ. ಹಣಕಾಸು ಸಚಿವಾಲಯವು ಈ ಅಧಿಸೂಚನೆಯನ್ನು ಹೊರಡಿಸಿದೆ.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಅಧ್ಯಕ್ಷರನ್ನಾಗಿ ದಿನೇಶ್ ಕುಮಾರ್ ಅವರನ್ನು ನೇಮಿಸುವಂತೆ ಬ್ಯಾಂಕ್ಸ್ ಬೋರ್ಡ್ ಬ್ಯೂರೋ (ಬಿಬಿಬಿ) ಕಳೆದ ತಿಂಗಳು ಸರ್ಕಾರಕ್ಕೆ ಶಿಫಾರಸ್ಸು ಮಾಡಿತ್ತು. ದಿನೇಶ್ ಕುಮಾರ್ ಅವರು 2017ರಲ್ಲಿ ಎಸ್ಬಿಐ ಅಧ್ಯಕ್ಷರ ಹುದ್ದೆಗೆ ಸ್ಪರ್ಧಿಸಿದ್ದರು.