ನವದೆಹಲಿ: ಎಲ್ಎಸಿಯಾದ್ಯಂತ ಶಾಂತಿ ತೀವ್ರವಾಗಿ ಹದಗೆಟ್ಟಿದ್ದು, ಇಡೀ ಭಾರತ-ಚೀನಾ ಸಂಬಂಧದ ಮೇಲೆ ಪರಿಣಾಮ ಬೀರಿದೆ ಎಂದು ವಿದೇಶಾಂಗ ಸಚಿವ ಎಸ್ ಜೈಶಂಕರ್ ಹೇಳಿದ್ದಾರೆ.
ಲಡಾಖ್ ಗಡಿ ಪ್ರದೇಶದಲ್ಲಿ ಎಲ್ಎಸಿಯಾದ್ಯಂತ 5 ತಿಂಗಳ ಹಿಂದಿನ ಚೀನಾ-ಭಾರತ ಯೋಧರ ನಡುವಿನ ಘರ್ಷಣೆಯಿಂದಾಗಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿದ್ದು, ಉಭಯ ರಾಷ್ಟ್ರಗಳೂ ಗಡಿಯಲ್ಲಿ 50,000 ಸಿಬ್ಬಂದಿಗಳನ್ನು ನಿಯೋಜಿಸಿವೆ, ಈ ಹಿನ್ನೆಲೆಯಲ್ಲಿ ವಿದೇಶಾಂಗ ಸಚಿವರ ಮಹತ್ವ ಪಡೆದುಕೊಂಡಿದೆ.
ಭಾರತ-ಚೀನಾ ನಡುವಿನ ಸಂಬಂಧದ ಬಗ್ಗೆ ಐತಿಹಾಸಿಕ ಮಾಹಿತಿಗಳು, ಕಳೆದ 3 ದಶಕಗಳ ಅಭಿವೃದ್ಧಿಯ ಕುರಿತ ದಿ ಇಂಡಿಯಾ ವೇ ಎಂಬ ತಮ್ಮ ಪುಸ್ತಕದ ಬಗ್ಗೆ ವೆಬಿನಾರ್ ಕಾರ್ಯಕ್ರಮದಲ್ಲಿ ಮಾತನಾಡಿರುವ ಜೈಶಂಕರ್, ಭಾರತ ಚೀನಾ ನಡುವಿನ ಸಂಬಂಧ ತೀರಾ ಸಂಕೀರ್ಣ, ಕಠಿಣವಾಗಿದ್ದು, 1980 ರಿಂದ ವ್ಯಾಪಾರ, ಪ್ರವಾಸೋದ್ಯಮ ಸೇರಿದಂತೆ ಹಲವು ಕ್ರಮಗಳಿಂದ ಸಹಜ ಸ್ಥಿತಿಗೆ ಬಂದಿತ್ತು.
ಗಡಿ ಪ್ರಶ್ನೆಯನ್ನು ಇತ್ಯರ್ಥಗೊಳಿಸಬೇಕು ಎಂಬುದು ನಮ್ಮ ನಿಲುವಲ್ಲ, ಗಡಿ ಪ್ರಶ್ನೆಗಳು ತೀರಾ ಸಂಕೀರ್ಣ ಹಾಗೂ ಕಠಿಣವಾದ ವಿಷಯಗಳಾಗಿವೆ ಎಂಬುದು ನಮಗೂ ಗೊತ್ತು. ಹಲವು ಹಂತಗಳಲ್ಲಿ ಹಲವು ಸುತ್ತಿನ ಮಾತುಕತೆ ನಡೆದಿದೆ, ಒಂದು ದ್ವಿಪಕ್ಷೀಯ ಸಂಬಂಧಕ್ಕೆ ಇದು ಅತ್ಯಂತ ಹೆಚ್ಚಿನ ಮಟ್ಟದ ನಿರೀಕ್ಷೆಯಾಗಿದೆ ಎಂದು ಜೈಶಂಕರ್ ತಿಳಿಸಿದ್ದಾರೆ.
ಜಾಗತಿಕ ಮಟ್ಟದಲ್ಲಿ ಭಾರತ ಹಾಗೂ ಚೀನಾ ಎರಡೂ ದೊಡ್ಡ ಪಾತ್ರಗಳನ್ನು ವಹಿಸುತ್ತಿವೆ, ಆದರೆ ಉಭಯ ದೇಶಗಳೂ ಹೇಗೆ ಸಮತೋಲನ ಕಾಯ್ದುಕೊಳ್ಳಲಿವೆ ಎಂಬುದೇ ದೊಡ್ಡ ಪ್ರಶ್ನೆಯಾಗಿದೆ ಎಂದು ಜೈಶಂಕರ್ ಅಭಿಪ್ರಾಯಪಟ್ಟಿದ್ದಾರೆ.