ಕೊರೋನಾ ಔಷಧಿಯನ್ನು ಚುನಾವಣಾ ಅಸ್ತ್ರವನ್ನಾಗಿ ಬಳಸಿಕೊಳ್ಳಬಾರದು, ದೇಶದ ಎಲ್ಲ ಜನರಿಗೂ ಉಚಿತವಾಗಿ ಕೊರೋನಾ ಲಸಿಕೆ ನೀಡಬೇಕೆಂದು ವಿರೋಧ ಪಕ್ಷಗಳು ಒತ್ತಾಯಿಸಿದ್ದವು. ಈ ಹಿನ್ನೆಲೆಯಲ್ಲಿ ಕೇಂದ್ರ ಸಚಿವ ಪ್ರತಾಪ್ ಸಾರಂಗಿ ಭಾರತದ ಎಲ್ಲ ಜನರಿಗೂ ಉಚಿತವಾಗಿ ಕೊರೋನಾ ಲಸಿಕೆ ನೀಡುವುದಾಗಿ ಘೋಷಿಸಿದ್ದಾರೆ.
ಅಕ್ಟೋಬರ್ 28ರಿಂದ ಆರಂಭವಾಗಲಿರುವ ಬಿಹಾರ ರಾಜ್ಯ ವಿಧಾನಸಭಾ ಚುನಾವಣೆಗೆ ಬಿಜೆಪಿ ಕಳೆದ ಗುರುವಾರ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದ್ದು, ಪ್ರಣಾಳಿಕೆಯಲ್ಲಿ ಬಿಹಾರದ ಎಲ್ಲರಿಗೂ ಉಚಿತ ಕೊರೋನಾ ವೈರಸ್ ಲಸಿಕೆ ನೀಡುವ ಭರವಸೆ ನೀಡಿತ್ತು. ಇದರ ಜೊತೆಗೆ ಬಿಹಾರದ ಕಾರ್ಮಿಕರಿಗೆ ಬಿಹಾರ ರಾಜ್ಯದಲ್ಲಿಯೇ ಉದ್ಯೋಗ ಸೃಷ್ಟಿಸುವುದಕ್ಕೆ ಮೊದಲ ಆದ್ಯತೆಯನ್ನು ನೀಡುವುದಾಗಿ ತಿಳಿಸಿತ್ತು.
ಕೊರೋನಾ ಲಸಿಕೆಯನ್ನು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಅನುಮೋದಿಸಿದ ಕೂಡಲೇ ಬಿಹಾರದ ಪ್ರತಿಯೊಬ್ಬ ವ್ಯಕ್ತಿಗೂ ಲಸಿಕೆ ನೀಡುವುದು ನಮ್ಮ ಸಂಕಲ್ಪವಾಗಿದೆ. ಲಸಿಕೆಗೆ ಅನುಮತಿ ದೊರಕಿದ ಕೂಡಲೇ ಪ್ರತಿಯೊಬ್ಬರಿಗೂ ಉಚಿತವಾಗಿ ಲಸಿಕೆ ನೀಡಲಾಗುತ್ತದೆ. ಪ್ರಣಾಳಿಕೆಯಲ್ಲಿ ಇದು ನಾವು ನೀಡುತ್ತಿರುವ ಮೊದಲ ಭರವಸೆಯಾಗಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಘೋಷಿಸಿದ್ದರು. ಇದು ತೀವ್ರ ವಿವಾದಕ್ಕೆ ಕಾರಣವಾಗಿತ್ತು.
ಪ್ರಧಾನಿ ನರೇಂದ್ರ ಮೋದಿ ಅವರು ಇಡೀ ದೇಶದ ಜನರಿಗೆ ಉಚಿತವಾಗಿ ಕೊರೋನಾ ಲಸಿಕೆ ನೀಡುವುದಾಗಿ ಘೋಷಿಸಿದ್ದಾರೆ. ಪ್ರತಿಯೊಬ್ಬ ವ್ಯಕ್ತಿಗೆ ಕೊರೋನಾ ಲಸಿಕೆ ನೀಡಲು 500 ರೂ. ವೆಚ್ಚವಾಗುತ್ತದೆ ಎಂದು ಅಂದಾಜಿಸಲಾಗಿದೆ. ಆ ವೆಚ್ಚವನ್ನು ಸರ್ಕಾರವೇ ಭರಿಸಲಿದೆ ಎಂದು ಕೇಂದ್ರ ಸರ್ಕಾರದ ಮೀನುಗಾರಿಕೆ, ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಎಂಟರ್ಪ್ರೈಸಸ್ನ ರಾಜ್ಯ ಸಚಿವ ಪ್ರತಾಪ್ ಸಾರಂಗಿ ತಿಳಿಸಿದ್ದಾರೆ.