ತಿರುವನಂತಪುರ: ಚಿನ್ನ ಕಳ್ಳಸಾಗಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅಮಾನತುಗೊಂಡಿರುವ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಮಾಜಿ ವೈಯಕ್ತಿಕ ಕಾರ್ಯದರ್ಶಿ ಎಂ.ಶಿವಶಂಕರ್ ಅವರಿಗೆ ಸರ್ಕಾರ ಒಂದು ವರ್ಷದ ರಜೆ ನೀಡಿದೆ. ಪ್ರಸ್ತುತ ಅಮಾನತುಗೊಂಡಿರುವ ಶಿವಶಂಕರ್ ಅವರಿಗೆ ಜುಲೈ 7 ರಿಂದ ಅನ್ವಯಗೊಳ್ಳುವಂತೆ ರಜೆ ನೀಡಲಾಗಿದೆ.
ವೈಯಕ್ತಿಕ ಕಾರಣಗಳಿಗಾಗಿ ಅವರಿಗೆ ಅರ್ಹವಾದ ರಜೆ ನೀಡಲಾಗಿದೆ ಎಂದು ಸರ್ಕಾರ ಸ್ಪಷ್ಟಪಡಿಸಿದೆ. ಸಾರ್ವಜನಿಕ ಆಡಳಿತ ಇಲಾಖೆಯಿಂದ ಈ ಆದೇಶ ಹೊರಡಿಸಲಾಗಿದೆ. ಹಿಂದಿನ ಅವಧಿಯ ರಜೆಯೊಂದಿಗೆ, ಶಿವಶಂಕರ್ ಅಮಾನತು ಅವಧಿಗೆ ಸಂಬಳವನ್ನೂ ಪಡೆಯುತ್ತಾರೆ. ಅಮಾನತುಗೊಂಡ ಅಧಿಕಾರಿಗಳಿಗೆ ರಜೆ ನೀಡುವ ಸರ್ಕಾರದ ಕ್ರಮ ಅಸಾಮಾನ್ಯವಾಗಿದೆ. ಅಮಾನತು ಅವಧಿ ಮುಗಿದ ನಂತರ ರಜೆ ನೀಡಲಾಗಿಲ್ಲ ಎಂಬುದು ಗಮನಾರ್ಹ.
ತಿರುವನಂತಪುರ ಚಿನ್ನ ಕಳ್ಳಸಾಗಣೆ ಪ್ರಕರಣದಲ್ಲಿ ರಾಜ್ಯ ಸರ್ಕಾರದ ಮೇಲೆ ಒತ್ತಡ ಹೇರಿದ ಬಲವಾದ ಆರೋಪದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಯ ಮಾಜಿ ಪ್ರಧಾನ ಕಾರ್ಯದರ್ಶಿ ಶಿವಶಂಕರ್ ಅವರನ್ನು ಅಮಾನತುಗೊಳಿಸಲಾಗಿತ್ತು. ಆರೋಪದ ಹಿನ್ನೆಲೆಯಲ್ಲಿ ಮುಖ್ಯ ಕಾರ್ಯದರ್ಶಿ ನೇತೃತ್ವದ ಪರಿಶೀಲನಾ ಸಮಿತಿಯು ಅವರನ್ನು ಅಮಾನತುಗೊಳಿಸಲು ನಿರ್ಧರಿಸಿತು. ಶಿವಶಂಕರ್ ಅವರ ಅಮಾನತು ಆರಂಭದಲ್ಲಿ ಮೂರು ತಿಂಗಳು ಮತ್ತು ನಂತರ ಇನ್ನೂ ಮೂರು ತಿಂಗಳು ವಿಸ್ತರಿಸಲಾಗಿತ್ತು.
ಚಿನ್ನ ಕಳ್ಳಸಾಗಣೆ ಪ್ರಕರಣದ ತನಿಖೆ ಮುಂದುವರಿಯುತ್ತಿರುವುದರಿಂದ ಶಿವಶಂಕರ್‍ಗೆ ಸರ್ಕಾರ ಒಂದು ವರ್ಷದ ರಜೆ ನೀಡಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮೂರು ಬಾರಿ ರಾಷ್ಟ್ರೀಯ ತನಿಖಾ ಸಂಸ್ಥೆ ಪ್ರಶ್ನಿಸಿದೆ.