ನವದೆಹಲಿ: ಜನ್ಮ ಕೊಟ್ಟ ತಂದೆಯನ್ನು ಅವರ ಮುಪ್ಪಿನ ಕಾಲದಲ್ಲಿ ಮನೆಯಿಂದ ಹೊರಹಾಕಿದ್ದು ಏಕೆ? ಎಂದು ಇಬ್ಬರು ಗಂಡು ಮಕ್ಕಳನ್ನು ಸುಪ್ರೀಂ ಕೋರ್ಟ್ ಖಾರವಾಗಿ ಪ್ರಶ್ನಿಸಿದೆ.
ನೀವು ಈ ಹಂತಕ್ಕೆ ಏರಲು ಅವರು (ತಂದೆ-ತಾಯಿ) ತಮ್ಮ ಜೀವನವನ್ನೇ ಸವೆಸಿರುವುದನ್ನು ನೀವು ಮರೆತು, ವೃದ್ಧಾಪ್ಯದಲ್ಲಿ ಅವರನ್ನು ಕಡೆಗಣಿಸಿದ್ದೀರಿ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದೆ.
ವಯೋವೃದ್ಧ ತಂದೆಯೊಬ್ಬರು ಸಲ್ಲಿಸಿದ್ದ ಅರ್ಜಿಯ ವಿಚಾರಣೆಯ ವೇಳೆ ದೆಹಲಿಯ ಇಬ್ಬರು ಸಹೋದರರ ವಿರುದ್ದ ಸುಪ್ರೀಂ ಕೋರ್ಟ್ ಕೆಂಡಾಮಂಡಲವಾಯಿತು.
ಬಹು ರಾಷ್ಟ್ರೀಯ ಕಂಪನಿಗಳಲ್ಲಿ ಕೆಲಸ ಮಾಡುತ್ತಿರುವ ತನ್ನ ಇಬ್ಬರು ಪುತ್ರರು ಕರೋಲ್ ಬಾಘ್ ನಲ್ಲಿರುವ ತಮ್ಮ ಪಿತ್ರಾರ್ಜಿತ ಆಸ್ತಿಯನ್ನು ತೆಗೆದುಕೊಂಡು, ಅದರಿಂದ ಬಾಡಿಗೆ ಪಡೆಯುತ್ತಿದ್ದಾರೆ, ಆದರೆ ತಮ್ಮನ್ನು ತಮ್ಮ ಮನೆಯಿಂದಲೇ ಹೊರ ಹಾಕಿದ್ದಾರೆ.
ವಯೋ ವೃದ್ಧನಾಗಿರುವ ತಮಗೆ ನಿರ್ವಹಣೆಯ ವೆಚ್ಚವನ್ನೂ ನೀಡದೆ ಕಡೆಗಣಿಸಿದ್ದಾರೆ ಎಂದು ಆರೋಪಿಸಿ ದೆಹಲಿ ಮೂಲದ ವ್ಯಕ್ತಿಯೊಬ್ಬರು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.
ಅರ್ಜಿಯನ್ನು ವಿಚಾರಣೆಗೆ ಸ್ವೀಕರಿಸಿದ ನ್ಯಾಯಮೂರ್ತಿ ಖಾನ್ವಿಲ್ಕರ್ ನೇತೃತ್ವದ ನ್ಯಾಯಪೀಠ. ತಂದೆ ತಾಯಿಯರ ವಿಷಯದಲ್ಲಿ ಮಕ್ಕಳ ಈ ಮನೋಭಾವವನ್ನು ಕಠಿಣ ಶಬ್ದಗಳಲ್ಲಿ ಖಂಡಿಸಿತು.
ತಂದೆಯ ಪರ ವಕೀಲರು ತಮ್ಮ ಕಕ್ಷಿದಾರರಿಗೆ ಜೀವನ ನಿರ್ವಹಣೆಗಾಗಿ ಮಾಸಿಕ 10 ಸಾವಿರ ಯನ್ನು ಕೊಡಿಸಬೇಕೆಂದು ಕೋರ್ಟ್ ಗೆ ಮನವಿ ಮಾಡಿದ್ದು, ಪ್ರತಿಕ್ರಿಯೆ ನೀಡುವಂತೆ ಇಬ್ಬರು ಮಕ್ಕಳಿಗೆ ಸುಪ್ರೀಂ ಕೋರ್ಟ್ ಸೂಚಿಸಿದೆ.