ಮುಳ್ಳೇರಿಯ: ಜಿಲ್ಲೆಯ ಪ್ರಸಿದ್ದ ಮಂತ್ರ-ತಂತ್ರ ಮನೆತನಗಳಲ್ಲಿ ಒಂದಾದ ಉಡುಪಮೂಲೆಯ ಗೋಪಾಲಕೃಷ್ಣ ಭಟ್(76)ಅಲ್ಪ ಕಾಲದ ಅಸೌಖ್ಯದ ಬಳಿಕ ಶುಕ್ರವಾರ ಸ್ವಗೃಹದಲ್ಲಿ ನಿಧನರಾದರು. ತಿರುವನಂತಪುರ ಆಳ್ವಾಂಚೇರಿ ನಂಬೂದಿರಿ ವಂಶ ಅರಸುಮನೆತನದ ಆಸ್ಥಾನ ವಿದ್ವಾಂಸ ವಾಸುದೇವ ನಂಬೂದಿರಿಯವರಿಂದ ತಂತ್ರಶಾಸ್ತ್ರ ಅಭ್ಯಸಿಸಿದ್ದ ಉಡುಪಮೂಲೆ ದಿ. ಶಂಕರ ಭಟ್ಟರ ಮೊಮ್ಮಗನಾಗಿ ಅಜ್ಜನಿಂದ ಮಂತ್ರತಂತ್ರಗಳ ಅಭ್ಯಸಿಸಿದ್ದರು. ಧಾರವಾಡ ವಿವಿಯಿಂದ ಪದವಿ ಪಡೆದಿದ್ದ ಗೋಪಾಲಕೃಷ್ಣ ಬಟ್ ಉದ್ಯೋಗ ವಿನಿಮಯ ಕೇಂದ್ರದ ಮೂಲಕ ತಾತ್ಕಾಲಿಕ ನೆಲೆಯ ಶಿಕ್ಷಕರಾಗಿ ನೆಟ್ಟಣಿಗೆ ಹಾಗೂ ಬೆಳ್ಳೂರು ಶಾಲೆಗಳಲ್ಲಿ ಎರಡು ವರ್ಷ ಶಿಕ್ಷಕರೂ ಆಗಿದ್ದರು. ವಿದ್ವಾನ್ ವಳಕ್ಕುಂಜ ಸುಬ್ರಾಯ ಭಟ್ಟರಿಂದ ಸಂಗೀತ ಶಿಕ್ಷಣ ಪಡೆದಿದ್ದರು. ಜೊತೆಗೆ ಪಿಟೀಲನ್ನೂ ಕಲಿತಿದ್ದರು. ಕುದ್ಕಾಡಿ ವಿಶ್ವನಾಥ ರೈ ಅವರ ಗರಡಿಯಲ್ಲಿ ಭರತನಾಟ್ಯವನ್ನೂ ಅಧ್ಯಯನಮಾಡಿದ್ದರು. ಹವ್ಯಾಸಿ ಯಕ್ಷಗಾನ, ತಾಳಮದ್ದಳೆ ಕಲಾವಿದರಾಗಿ ಹೆಚ್ಚು ಪರಿಚಿತರಾಗಿದ್ದರು.
ಹಿರಿಯರಿಂದ ಬಳುವಳಿಯಾಗಿ ಬಂದ ಮಂತ್ರವಾದದ ಮೂಲಕ ಹೆಚ್ಚು ಜನಾನುರಾಗಿಯಾಗಿದ್ದ ಗೋಪಾಲಕೃಷ್ಣ ಭಟ್ ಒಂದು ಕಾಲದಲ್ಲಿ ಅವಿಭಜಿತ ದಕ್ಷಿಣ ಕನ್ನಡ-ಕಾಸರಗೋಡಿನ ಪ್ರಧಾನ ವೈದಿಕ ವಿದ್ವಾಂಸರಾಗಿ ಜನಜನಿತರಾಗಿದ್ದರು. ಎಡನೀರು ಮಠದೊಂದಿಗೆ ಹತ್ತಿರವಾಗಿದ್ದ ಗೋಪಾಲಕೃಷ್ಣ ಭಟ್ ಇತ್ತೀಚೆಗೆಯಷ್ಟೇ ಬ್ರಹ್ಮೈಕ್ಯರಾದ ಶ್ರೀಕೇಶವಾನಂದ ಭಾರತೀ ಶ್ರೀಗಳೊಂದಿಗೆ ನಿಕಟರಾಗಿದ್ದರು. ಮೃತರು ಪತ್ನಿ, ಇಬ್ಬರು ಪುತ್ರರು, ಪುತ್ರಿ ಸಹಿತ ಅಪಾರ ಬಂಧುಗಳನ್ನು ಅಗಲಿದ್ದಾರೆ.