ಲಖನೌ: ಪಾಕಿಸ್ತಾನ ಮತ್ತು ಚೀನಾದೊಂದಿಗೆ ಭಾರತ ಯಾವಾಗ ಯುದ್ಧ ಮಾಡಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ನಿರ್ಧರಿಸಿದ್ದಾರೆ ಎಂದು ಉತ್ತರ ಪ್ರದೇಶದ ಬಿಜೆಪಿ ಮುಖ್ಯಸ್ಥ ಸ್ವತಂತ್ರ ದೇವ್ ಸಿಂಗ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಲಡಾಖ್ ನ ವಾಸ್ತವ ನಿಯಂತ್ರಣ ರೇಖೆ ಬಳಿ ಭಾರತ ಮತ್ತು ಚೀನಾ ನಡುವೆ ಉದ್ವಿಗ್ನತೆ ಏರ್ಪಟ್ಟಿರುವಂತೆಯೇ ಸ್ವತಂತ್ರ ದೇವ್ ಸಿಂಗ್ ಈ ರೀತಿ ಹೇಳಿದ್ದಾರೆ.ಸುಪ್ರೀಂ ಕೋರ್ಟ್ ತೀರ್ಪಿನ ನಂತರ ಅಯೋಧ್ಯೆಯಲ್ಲಿ ರಾಮ ದೇವಾಲಯ ನಿರ್ಮಾಣದ ಆರಂಭ ಮತ್ತು ಸಂವಿಧಾನದ 370 ನೇ ವಿಧಿ ಅನ್ವಯ ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ರದ್ಧತಿಯೊಂದಿಗೆ ತಮ್ಮ ಹೇಳಿಕೆಯನ್ನು ಬಿಜೆಪಿ ಮುಖಂಡ ಜೋಡಿಸಿದ್ದಾರೆ. ರಾಮ ಮಂದಿರ, ಸಂವಿಧಾನದ 370ನೇ ವಿಧಿ ರದ್ಧತಿ ನಿರ್ಧಾರದಂತೆಯೇ , ಪ್ರಧಾನಿ ನರೇಂದ್ರ ಮೋದಿ ಪಾಕಿಸ್ತಾನ, ಮತ್ತು ಚೀನಾದೊಂದಿಗೆ ಯಾವಾಗ ಯುದ್ಧ ಮಾಡಬೇಕೆಂದು ನಿರ್ಧರಿಸಿದ್ದಾರೆ, ಸಾಮಾಜಿಕ ಮಾಧ್ಯಮದಲ್ಲಿನ ವಿಡಿಯೋ ವೊಂದರಲ್ಲಿ ಹೀಗೆ ಹೇಳಿರುವುದನ್ನು ತಾವು ಕೇಳಿರುವುದಾಗಿ ಬಿಜೆಪಿ ಮುಖಂಡ ಹೇಳಿದ್ದಾರೆ.
ಬಿಜೆಪಿ ಶಾಸಕ ಸಂಜಯ್ ಯಾದವ್ ಅವರ ಮನೆಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಸಿಂಗ್ ನೀಡಿರುವ ಹೇಳಿಕೆಯ ವಿಡಿಯೋ ಬಿಡುಗಡೆಯಾಗಿದೆ. ಸಮಾಜವಾದಿ ಪಕ್ಷ ಮತ್ತು ಬಹುಜನ ಸಮಾಜವಾದಿ ಪಕ್ಷದ ಕಾರ್ಯಕರ್ತರನ್ನು ಉಗ್ರರೊಂದಿಗೆ ಹೋಲಿಕೆ ಮಾಡಿದ್ದಾರೆ.
ಸಿಂಗ್ ಅವರ ಹೇಳಿಕೆ ಕುರಿತಂತೆ ಪ್ರತಿಕ್ರಿಯಿಸಿರುವ ಸಂಸದ ರವೀಂದ್ರ ಕುಶ್ವಾಹ, ಪಕ್ಷದ ಕಾರ್ಯಕರ್ತರಲ್ಲಿ ಆತ್ಮಸ್ಥೈರ್ಯವನ್ನು ತುಂಬಿಸಲು ಉತ್ತರ ಪ್ರದೇಶ ಬಿಜೆಪಿ ಮುಖ್ಯಸ್ಥರು ಈ ರೀತಿಯ ಹೇಳಿಕೆ ನೀಡಿದ್ದಾರೆ ಎಂದು ಸಮರ್ಥಿಸಿಕೊಂಡಿದ್ದಾರೆ.