ಕೊಚ್ಚಿ: ಮುಖ್ಯಮಂತ್ರಿಯ ಮಾಜಿ ಪ್ರಧಾನ ಕಾರ್ಯದರ್ಶಿ ಎಂ.ಶಿವಶಂಕರ್ ವಿರುದ್ಧ ಜಾರಿ ನಿರ್ದೇಶನಾಲಯಕ್ಕೆ ಹೆಚ್ಚಿನ ಸಾಕ್ಷ್ಯಗಳು ದೊರೆತಿವೆ. ಕಳೆದ ನಾಲ್ಕು ವರ್ಷಗಳಲ್ಲಿ, ಶಿವಶಂಕರ್ ಮತ್ತು ಇತರರು ವಿವಿಧ ಸರ್ಕಾರಿ ಯೋಜನೆಗಳು ಮತ್ತು ಐಟಿ ವಹಿವಾಟುಗಳಿಗೆ ಮಾತ್ರ ಲಂಚರೂಪವಾಗಿ 100 ಕೋಟಿ ರೂ. ಲಭಿಸಿರುವುದನ್ನು ಖಾತ್ರಿಪಡಿಸಲಾಗಿದ್ದು ಇತರ ಕೆಲವು ಗಣ್ಯರು ಸಹ ಅವ್ಯವಹಾರದಲ್ಲಿ ಭಾಗಿಯಾಗಿದ್ದಾರೆ ಎಂದು ತಿಳಿದುಬಂದಿದೆ.
ವಿದೇಶದಲ್ಲಿ ಅನೇಕ ವಹಿವಾಟುಗಳು ನಡೆದಿವೆ. ಮತ್ತು ಐಎಎಸ್ ಅಧಿಕಾರಿ ಪ್ರಕರಣದಲ್ಲಿ ಒಳಗೊಂಡಿರುವುದರಿಂದ ಸಿಬಿಐ ಈ ಪ್ರಕರಣದ ತನಿಖೆ ನಡೆಸಬೇಕು ಎಂದು ಇಡಿ ಹೇಳಿದೆ. ಇಡಿ ಶೀಘ್ರದಲ್ಲೇ ವರದಿಯನ್ನು ಸಲ್ಲಿಸಲಿದೆ.
ಚಿನ್ನ ಕಳ್ಳಸಾಗಣೆ ಪ್ರಕರಣದ ಪ್ರಮುಖ ಆರೋಪಿ ಸ್ವಪ್ನಾ ಸುರೇಶ್ ಅವರ ಐಫೆÇೀನ್ ಮತ್ತು ಲ್ಯಾಪ್‍ಟಾಪ್‍ನಿಂದ ವಶಪಡಿಸಿಕೊಂಡ ಮಾಹಿತಿಯ ಆಧಾರದ ಮೇಲೆ ಇಡಿ ವಿವರವಾದ ತನಿಖೆ ನಡೆಸಿತು. ಇದರೊಂದಿಗೆ, ಶಿವಶಂಕರ್ ಹಾಗೂ ಸ್ವಪ್ನ ದುಬೈನಲ್ಲಿ ಐಟಿ ವ್ಯವಹಾರವನ್ನು ಪ್ರಾರಂಭಿಸಲು ಯೋಜಿಸಿದ್ದರೆಂದು ಜಾರಿ ನಿರ್ದೇಶನಾಲಯ ಪತ್ತೆಹಚ್ಚಿದೆ. ಕೇರಳದ ವಿವಿಧ ವಹಿವಾಟುಗಳಿಗೆ ಲಭ್ಯವಾದ ಲಂಚದ ಹಣವನ್ನು ಇದಕ್ಕಾಗಿ ಬಳಸಿಕೊಳ್ಳಲು ತೀರ್ಮಾನಿಸಲಾಗಿತ್ತು ಎಂಬ ಆತಂಕಕಾರಿ ಮಾಹಿತಿ ಲಭ್ಯವಾಗಿದೆ.
ಸರ್ಕಾರಿ ಯೋಜನೆಗಳು ಮತ್ತು ಐಟಿ ಉದ್ಯಾನವನಗಳಿಗೆ ಸಂಬಂಧಿಸಿದ ರಿಯಲ್ ಎಸ್ಟೇಟ್ ವ್ಯವಹಾರಗಳಲ್ಲಿ 100 ಕೋಟಿ ರೂ. ನಿಕ್ಷೇಪಿಸಲಾಗಿದೆ. ಸಂದೀಪ್ ನಾಯರ್ ಕೂಡ ಈ ಬಗ್ಗೆ ಮಾಹಿತಿ ನೀಡಿದ್ದರು. ಐಟಿ ಯೋಜನೆಯೊಂದಕ್ಕೆ ಲಂಚವಾಗಿ ಪಡೆದ ಒಂದು ಕೋಟಿಯನ್ನು ದುಬೈನಲ್ಲಿ ಹಸ್ತಾಂತರಿಸಲಾಗಿತ್ತು.
ರಾಜ್ಯದ ಐಟಿ ಉದ್ಯಾನವನಗಳಿಗಾಗಿ ಸರ್ಕಾರ ಸ್ವಾಧೀನಪಡಿಸಿಕೊಂಡ ಭೂಮಿಯನ್ನು ಖಾಸಗಿ ಉದ್ಯಮಿಗಳಿಗೆ ವರ್ಗಾಯಿಸುವಲ್ಲಿ ಭಾರಿ ಭ್ರಷ್ಟಾಚಾರ ನಡೆದಿರುವುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಟೆಕ್ನೊಪಾರ್ಕ್ ನಲ್ಲಿ ಅಮೆರಿಕದ ಕಂಪನಿಯೊಂದಿಗಿನ ಒಪ್ಪಂದದ ಬಗ್ಗೆ ಇಡಿ ತನಿಖೆ ಆರಂಭಿಸಿದೆ.
ರಾಜ್ಯದ ಎಲ್ಲಾ ಐಟಿ ಉದ್ಯಾನವನಗಳ ಉಸ್ತುವಾರಿ ಅಧಿಕಾರಿಗಳನ್ನೂ ತನಿಖೆ ನಡೆಸಲಾಗುತ್ತಿದೆ. ಶಿವಶಂಕರ್ ರಾಜೀನಾಮೆ ನೀಡಿ ಬಳಿಕ ಕೇರಳದಿಂದ ಹೊರ ತೆರಳಿದ್ದರು. ಇವರಲ್ಲದೆ ಇನ್ನೂ ಕೆಲವು ಗಣ್ಯರು ಕೂಡ ನಿಗಾದಲ್ಲಿದ್ದಾರೆ.