ತಿರುವನಂತಪುರ: ಕೇರಳದ ಇಡುಕ್ಕಿ ಜಿಲ್ಲೆಯಲ್ಲಿರುವ ಪ್ರಮುಖ ಪ್ರವಾಸಿ ತಾಣವಾದ 'ವಾಗಮನ್' ಬೆಟ್ಟ ಪ್ರದೇಶದಲ್ಲಿ ಇದೇ ಮೊದಲ ಬಾರಿಗೆ 'ಗ್ರೀನ್ ಚೆಕ್‌ಪೋಸ್ಟ್'ಗಳನ್ನು ಕೇರಳ ಸರ್ಕಾರ ಸ್ಥಾಪಿಸಿದೆ.
ಇಲ್ಲಿನ ಪರಿಸರವನ್ನು ಕಾಪಾಡುವ ಉದ್ದೇಶದಿಂದ ಹಾಗೂ ಈ ಪ್ರದೇಶವನ್ನು ಪ್ಲಾಸ್ಟಿಕ್ ಮುಕ್ತಗೊಳಿಸುವ ಗುರಿಯನ್ನು ಇರಿಸಿಕೊಂಡು, ಬೆಟ್ಟಕ್ಕೆ ಇರುವ ಐದು ಪ್ರವೇಶ ಮಾರ್ಗಗಳಲ್ಲಿ 'ಹರಿತ ಕೇರಳಂ'(ಹಸಿರು ಕೇರಳ)ಯೋಜನೆಯಡಿ 'ಹಸಿರುಸೇನೆ'ಯನ್ನು ಸರ್ಕಾರ ನಿಯೋಜಿಸಿದೆ.
ಈ ಪ್ರದೇಶದಕ್ಕೆ ಪ್ರವಾಸಿಗರ ಸಂಖ್ಯೆ ಏರಿಕೆಯಾಗುತ್ತಿದ್ದು, ಪ್ಲಾಸ್ಟಿಕ್ ಸೇರಿದಂತೆ ಇತರೆ ತ್ಯಾಜ್ಯ ಪ್ರಮಾಣ ಹೆಚ್ಚುತ್ತಿದೆ. ಈ ಕಾರಣದಿಂದಾಗಿ ಪರಿಸರಕ್ಕೆ ಹಾನಿಯಾಗದಂತೆ, ಹಿಂದಿನ ಸೌಂದರ್ಯವನ್ನು ಮರುಕಳಿಸುವ ಉದ್ದೇಶದಿಂದ ಈ ಚೆಕ್‌ಪೋಸ್ಟ್‌ಗಳನ್ನು ರಚಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದರು.
'ಈ ಚೆಕ್‌ಪೋಸ್ಟ್‌ಗಳಲ್ಲಿ ಬೆಟ್ಟಕ್ಕೆ ಪ್ರವೇಶಿಸುವ ಎಲ್ಲ ವಾಹನಗಳ ತಪಾಸಣೆ ನಡೆಯಲಿದೆ. ಪ್ರವಾಸಿಗರ ಬಳಿ ಪ್ಲಾಸ್ಟಿಕ್ ಚೀಲಗಳು ಅಥವಾ ಇನ್ನಿತರೆ ಯಾವುದೇ ಹಾನಿಕಾರಕ ವಸ್ತುಗಳು ಇವೆಯೇ ಎನ್ನುವುದನ್ನು ಹಸಿರುಸೇನೆ ಸದಸ್ಯರು ಪರೀಕ್ಷಿಸಲಿದ್ದಾರೆ. ಚೆಕ್‌ಪೋಸ್ಟ್‌ಗೆ ಹೊಂದಿಕೊಂಡಿರುವಂತೆಯೇ ಗ್ರೀನ್ ಕೌಂಟರ್‌ಗಳಿದ್ದು, ಪ್ರವಾಸಿಗರಿಗೆ ಅವಶ್ಯಕತೆ ಇದ್ದಲ್ಲಿ ಈ ಕೌಂಟರ್‌ಗಳಲ್ಲಿ ಬಟ್ಟೆಯ ಚೀಲಗಳು ದೊರೆಯುತ್ತವೆ. ಬೆಟ್ಟದ ಹಲವೆಡೆ 'ಬಾಟಲ್ ಬೂತ್ಸ್'ಗಳನ್ನು ತೆರೆಯಲಾಗಿದ್ದು, ಇಲ್ಲಿ ಪ್ಲಾಸ್ಟಿಕ್ ಬಾಟಲ್‌ಗಳನ್ನು ಪ್ರವಾಸಿಗರು ನೀಡಬೇಕು' ಎಂದು ಯೋಜನೆಯ ಕಾರ್ಯನಿರ್ವಾಹಕ ಉಪಾಧ್ಯಕ್ಷೆ ಟಿ.ಎನ್‌ಸೀಮಾ ತಿಳಿಸಿದರು.