ಹತ್ರಾಸ್: ಹತ್ರಾಸ್ ದಲಿತ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ ಹಾಗೂ ಹತ್ಯೆ ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ(ಎಸ್ಐಟಿ) ಸಂತ್ರಸ್ತೆ ಕುಟುಂಬಸ್ಥರು ಪ್ರಸ್ತಾಪಿಸುವ ಎಲ್ಲಾ ವಿಷಯಗಳನ್ನು ಪರಿಶೀಲಿಸಲಿದೆ ಎಂದು ಉತ್ತರ ಪ್ರದೇಶ ಹೆಚ್ಚುವರಿ ಗೃಹ ಕಾರ್ಯದರ್ಶಿ ಅವನಿಶ್ ಅವಸ್ಥಿ ಅವರು ಶನಿವಾರ ಹೇಳಿದ್ದಾರೆ.
ಇಂದು ಹತ್ರಾಸ್ ನಲ್ಲಿ ಸಂತ್ರಸ್ತೆ ಕುಟುಂಬಸ್ಥರನ್ನು ಭೇಟಿ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಸ್‌ಐಟಿ ಪ್ರಾಥಮಿಕ ವರದಿ ನೀಡಿದ ಎರಡು ಗಂಟೆಗಳಲ್ಲೇ ಪೊಲೀಸ್ ವರಿಷ್ಠಾಧಿಕಾರಿ ಮತ್ತು ಈ ಪ್ರದೇಶದ ಸರ್ಕಲ್ ಇನ್ಸ್ ಪೆಕ್ಟರ್ ಸೇರಿದಂತೆ ಹಲವು ಪೊಲೀಸ್ ಸಿಬ್ಬಂದಿಯನ್ನು ಅಮಾನತುಗೊಳಿಸಿ ಶುಕ್ರವಾರ ಆದೇಶಿಸಲಾಗಿದೆ ಎಂದರು.
" ಇದು ಅತ್ಯಂತ ದುಃಖದ ಘಟನೆ. ನಾವು ಕುಟುಂಬದ ಪ್ರತಿಯೊಬ್ಬರನ್ನು ಭೇಟಿ ಮಾಡಿದ್ದೇವೆ. ನಾವು ಅವರೊಂದಿಗೆ ಮಾತನಾಡಿದ್ದೇವೆ ಮತ್ತು ತಪ್ಪಿತಸ್ಥರೆಂದು ಪರಿಗಣಿಸಲ್ಪಟ್ಟ ಎಲ್ಲರ ವಿರುದ್ಧವೂ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿರುವುದಾಗಿ" ಅವಸ್ಥಿ ಸುದ್ದಿಗಾರರಿಗೆ ತಿಳಿಸಿದರು.
"ಎಸ್‌ಐಟಿ ತನಿಖೆ ನಡೆಯುತ್ತಿದೆ ಮತ್ತು ಅದು ತನ್ನ ಕೆಲಸವನ್ನು ಮುಂದುವರಿಸಲಿದೆ. ಕುಟುಂಬ ಸದಸ್ಯರು ಕೆಲವು ಸಮಸ್ಯೆಗಳನ್ನು ಎತ್ತಿದ್ದಾರೆ. ಅವರು ಯಾವ ಅಂಶಗಳು ಮತ್ತು ದೂರುಗಳನ್ನು ಎತ್ತಿದ್ದರೂ, ಎಸ್‌ಐಟಿ ಅವುಗಳನ್ನು ಗಮನಿಸುತ್ತದೆ ಮತ್ತು ಅವುಗಳಲ್ಲಿ ಪ್ರತಿಯೊಂದನ್ನು ಖಚಿತಪಡಿಸಿಕೊಳ್ಳಲು ನಾವು ಎಲ್ಲಾ ಪ್ರಯತ್ನಗಳನ್ನು ಮಾಡುತ್ತೇವೆ ಎಂದು ಅವಸ್ಥಿ ವಿವರಿಸಿದರು.
ಯೋಗಿ ಆದಿತ್ಯನಾಥ್ ಸರ್ಕಾರವನ್ನು ಗುರಿಯಾಗಿಸಿಕೊಂಡು ಪ್ರತಿಪಕ್ಷಗಳು ಈ ಘಟನೆಯ ಬಗ್ಗೆ ಭಾರಿ ವಿವಾದ ಹುಟ್ಟುಹಾಕಿದ್ದರಿಂದ ಸಿಎಂ ಸೂಚನೆಯಂತೆ ಅವಸ್ಥಿ ಹಾಗೂ ಡಿಜಿಪಿ ಎಚ್ ಸಿ ಅವಸ್ತ್ಯಾ ಅವರು ಸಂತ್ರಸ್ತೆ ಕುಟಂಬ ಭೇಟಿ ಮಾಡಿದರು.