ಬದಿಯಡ್ಕ: ಜಗತ್ತಿನಲ್ಲಿ ಗಾಂಧೀಜಿಯವರಂತಹ ನಾಯಕರು ಹುಟ್ಟಿಲ್ಲ. ಎಲ್ಲಾ ದೇಶಗಳಿಂದಲೂ ಮಾನ್ಯ ಮಾಡಲ್ಪಟ್ಟವರು ಅವರು ಎಂದು ಪ್ರಗತಿಪರ ಕೃಷಿಕ, ಸಮಾಜ ಸೇವಕ ಕೆ.ಗಣಪತಿ ಭಟ್ ಪತ್ತಡ್ಕ ಅವರು ಹೇಳಿದರು.
ಏತಡ್ಕದ ಕುಂಬ್ಡಾಜೆ ಗ್ರಾಮ ಸೇವಾ ಸಂಘ ಗ್ರಂಥಾಲಯದ ಆಶ್ರಯದಲ್ಲಿ ವೈ.ವಿ ಸುಬ್ರಹ್ಮಣ್ಯ ಅವರ ನಿವಾಸ 'ಶಿವ ಸದನ'ದಲ್ಲಿ ಶುಕ್ರವಾರ ಜರಗಿದ ಗಾಂಧಿ ಜಯಂತಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಅವರು ಮಾತನಾಡಿದರು.
ಈ ಸಂದರ್ಭ ಮಾತನಾಡಿ ಗಾಂಧಿ ಚಿಂತನೆಗಳು ಎಲ್ಲಾ ಕಾಲಕ್ಕೂ ಪ್ರಸ್ತುತ ಎಂದು ತಿಳಿಸಿ ಗಾಂಧೀಜಿಯವರ ಜೀವನ ವೃತ್ತಾಂತವನ್ನು ವಿವರವಾಗಿ ಮುಂದಿರಿಸಿದರು.
ಇದೇ ಸಂದರ್ಭದಲ್ಲಿ ಕೇರಳ ರಾಜ್ಯ ಗ್ರಂಥಾಲಯ ಕೌನ್ಸಿಲ್ ಯೋಜನೆಯಂತೆ ಏತಡ್ಕ ಗ್ರಂಥಾಲಯದ ಹಿರಿಯ ಕಾರ್ಯಕರ್ತ ಗೋಪಾಲಕೃಷ್ಣ ಭಟ್ ವೈ, ಅಬ್ದುಲ್ ರಹಿಮಾನ್ ಹಾಜಿ, ವೈ.ವಿ ಸುಬ್ರಹ್ಮಣ್ಯ ಅವರನ್ನು ಖಾದಿ ವಸ್ತ್ರ ಹೊದಿಸಿ ಪುಸ್ತಕಗಳನ್ನಿತ್ತು ಗೌರವಿಸಲಾಯಿತು. ಗೌರವ ಸ್ವೀಕರಿಸಿದವರು ಕೃತಜ್ಞತೆ ವ್ಯಕ್ತಪಡಿಸಿದರು.
ಅಧ್ಯಕ್ಷತೆ ವಹಿಸಿದ ಗ್ರಂಥಾಲಯದ ಅಧ್ಯಕ್ಷ ಕೆ.ನರಸಿಂಹ ಭಟ್ ಮಾತನಾಡಿ ಗಾಂಧೀಜಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿಯವರನ್ನು ಸ್ಮರಿಸಿದರು.ಗಾಂಧಿ ಜಯಂತಿಯ ಕುರಿತು ಸ್ವರಚಿತ ಕವನವನ್ನು ವಾಚಿಸಿದರು.
ಆಶಾಗಂಗಾ ಪ್ರಾರ್ಥನೆ ಹಾಡಿದರು. ಉಪಾಧ್ಯಕ್ಷ ವೈ.ಕೆ ಗಣಪತಿ ಭಟ್ ಸ್ವಾಗತಿಸಿ, ಕಾರ್ಯದರ್ಶಿ ಕೆ.ಸುಬ್ರಹ್ಮಣ್ಯ ಭಟ್ ನಿರೂಪಿಸಿದರು. ಡಾ.ವೇಣುಗೋಪಾಲ ಕಳೆಯತ್ತೋಡಿ ವಂದಿಸಿದರು.