ಮುರಿದು ಬಿದ್ದ ಬಂಗಲೆಗಳು, ನೆಲಸಮವಾದ ಬಡವನ ಗುಡಿಸಲುಗಳು, ಚಕ್ಕೆ ಎದ್ದಿರುವ ರಸ್ತೆಗಳು. ಅಂದಹಾಗೆ ಇದು ಪ್ರಳಯದ ನಂತರ ಕಂಡ ದೃಶ್ಯಗಳಲ್ಲ. ಅರ್ಮೇನಿಯಾ ಮತ್ತು ಅಜೆರ್ಬೈಜಾನ್ ಮಧ್ಯೆ ನಡೆಯುತ್ತಿರುವ ಯುದ್ಧದ ಪರಿಣಾಮ. ಅರ್ಮೇನಿಯಾ ಮತ್ತು ಅಜೆರ್ಬೈಜಾನ್ ನಡುವೆ ಮೊಳಗಿರುವ ಘೋರ ಯುದ್ಧ ಸದ್ಯಕ್ಕೆ ನಿಲ್ಲುವ ಲಕ್ಷಣಗಳೇ ಕಾಣುತ್ತಿಲ್ಲ. ಹೇಗಾದರೂ ಮಾಡಿ ಎರಡೂ ದೇಶಗಳ ನಡುವೆ ಶಾಂತಿ ಮೂಡಿಸಬೇಕೆಂದು ವಿಶ್ವ ಸಮುದಾಯ ಪ್ರಯತ್ನಿಸುತ್ತಿದೆ. ಆದರೆ ಇದ್ಯಾವುದೂ ಫಲ ನೀಡಿಲ್ಲ.
ವಿಶ್ವದ ಶಕ್ತಿಶಾಲಿ ನಾಯಕ ಎಂದು ಕರೆಸಿಕೊಳ್ಳುವ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್, ಸ್ವತಃ ಎರಡೂ ದೇಶಗಳ ನಡುವೆ ಶಾಂತಿ ಮಾತುಕತೆಗೆ ವೇದಿಕೆ ಸಿದ್ಧಗೊಳಿಸುವೆ ಎಂದಿದ್ದರು. ಆದರೆ ತಲೆಕೆಟ್ಟವರಂತೆ ತಮ್ಮದೇ ಸೈನಿಕರು ಹಾಗೂ ಪ್ರಜೆಗಳನ್ನು ಬಲಿ ಹಾಕುತ್ತಿರುವ ಅರ್ಮೇನಿಯಾ-ಅಜೆರ್ಬೈಜಾನ್ ನಾಯಕರಿಗೆ ಬುದ್ಧಿ ಬಂದಂತೆ ಕಾಣುತ್ತಿಲ್ಲ.
ಅರ್ಮೇನಿಯಾ ಮತ್ತು ಅಜೆರ್ಬೈಜಾನ್ ನಡುವೆ ವಿವಾದಿತ ನಾಗೋರ್ನೊ ಹಾಗೂ ಕರಬಾಖ್ ಮೇಲಿನ ಹಕ್ಕುಸ್ವಾಮ್ಯಕ್ಕಾಗಿ ಯುದ್ಧ ಆರಂಭವಾಗಿ 10 ದಿನ ಕಳೆದಿದೆ. ಈಗಲಾದರೂ ಯುದ್ಧ ನಿಲ್ಲಿಸೋಣ ಎಂಬ ಮಾತು ಕೇಳಿಬಂದಿಲ್ಲ, ಇದು ಉರಿಯುವ ಬೆಂಕಿಗೆ ತುಪ್ಪ ಸುರಿದಿದೆ. ಇಷ್ಟೆಲ್ಲದರ ಮಧ್ಯೆ ಸೋಮವಾರ (ಅ. 12) ಅಮೆರಿಕ, ರಷ್ಯಾ ನೇತೃತ್ವದಲ್ಲಿ ಅರ್ಮೇನಿಯಾ-ಅಜೆರ್ಬೈಜಾನ್ ಯುದ್ಧಕ್ಕೆ ಬ್ರೇಕ್ ಹಾಕುವ ಸಲುವಾಗಿ ಸಂಧಾನ ಮಾತುಕತೆ ನಡೆಯಲಿದೆ. ಇದಕ್ಕಾಗಿ ರಷ್ಯಾ ರಾಜಧಾನಿ ಮಾಸ್ಕೋ ಸಜ್ಜಾಗಿ ನಿಂತಿದೆ.
3ನೇ ಮಹಾಯುದ್ಧಕ್ಕೆ ಕಾರಣವಾಗುತ್ತಾ ಈ ಜಗಳ..?:
ಅರ್ಮೇನಿಯಾ ಮತ್ತು ಅಜೆರ್ಬೈಜಾನ್ ಯುದ್ಧದಿಂದ ಇಡೀ ವಿಶ್ವಕ್ಕೆ ನಷ್ಟ ಕಾಡಲಿದೆ. ಏಕೆಂದರೆ ಈಗ ಯುದ್ಧ ನಡೆಯುತ್ತಿರುವ ಪ್ರದೇಶ ವಿಶ್ವಕ್ಕೆ ತೈಲ ಸರಬರಾಜು ಪ್ರಮುಖ ಜಾಗ. ಇಲ್ಲಿಂದ ಬಹುಪಾಲು ತೈಲ ವ್ಯವಹಾರ ನಡೆಯುತ್ತಿದೆ. ಆದರೆ ಈಗ ಯುದ್ಧ ನಡೆಯುತ್ತಿರುವುದು ಭಾರಿ ಆತಂಕ ಮೂಡಿಸಿದೆ. ಮತ್ತೊಂದು ಕಡೆ 3ನೇ ಮಹಾಯುದ್ಧಕ್ಕೂ ಈ ಕೋಳಿ ಜಗಳ ದಾರಿ ಮಾಡಿಕೊಡುವ ಸಾಧ್ಯತೆ ದಟ್ಟವಾಗಿರುವುದು ಆತಂಕ ಹೆಚ್ಚಿಸಿದೆ. ಏಕೆಂದರೆ ಅರ್ಮೇನಿಯಾ ಏಷ್ಯಾ ಖಂಡಕ್ಕೆ ಸೇರಿದರೆ, ಅಜೆರ್ಬೈಜಾನ್ ಯುರೇಷಿಯಾ ಭಾಗವಾಗಿದೆ. ಈ ಕಾರಣಕ್ಕೆ ಜಗತ್ತು ಮತ್ತೆ ಇಬ್ಭಾಗವಾಗುವ ಆತಂಕ ಎದುರಾಗಿದೆ.
ಯುದ್ಧಕ್ಕೆ ಕಾರಣ ಏನು..? :
ನಗೊರ್ನೊ-ಕರಬಾಖ್ ಸಾಕಷ್ಟು ಆದಾಯ ತಂದುಕೊಡಬಲ್ಲ ಪ್ರದೇಶಗಳು. 4,400 ಚ.ಕಿ.ಮೀ ವಿಸ್ತೀರ್ಣದ ಭೂಮಿಗೆ ಭಾರಿ ಬೇಡಿಕೆ ಇದೆ. ಹೀಗಾಗಿ ಈ ಪ್ರದೇಶಗಳ ಮೇಲೆ ನಿಯಂತ್ರಣ ಸಾಧಿಸಲು ಎರಡೂ ದೇಶಗಳು ಕಚ್ಚಾಡುತ್ತಿವೆ. ಈ ಹಿಂದೆ ಅಂದರೆ 1994ರಲ್ಲೂ ಇದೇ ವಿಚಾರಕ್ಕೆ ಅರ್ಮೇನಿಯ ಹಾಗೂ ಅಜೆರ್ಬೈಜಾನ್ ಬಡಿದಾಡಿಕೊಂಡಿವೆ. ಆದರೆ ನಂತರ ನಡೆದ ಸಂಧಾನದಲ್ಲಿ ತಕ್ಷಣಕ್ಕೆ ಯುದ್ಧ ನಿಂತಿದ್ದರೂ ದಶಕಗಳ ಕಾಲ ಬೂದಿ ಮುಚ್ಚಿದ ಕೆಂಡದಂತೆ ಇತ್ತು ಪರಿಸ್ಥಿತಿ. ಈಗ ಆ ಕೆಂಡ ಮತ್ತೆ ಬೆಂಕಿಯಾಗಿ, ಜ್ವಾಲೆಯ ರೂಪ ಪಡೆದಿದೆ. ಎರಡೂ ದೇಶಗಳ ನಾಯಕರ ದುರಾಸೆಗೆ ನೂರಾರು ಅಮಾಯಕ ಜೀವಗಳು ಬಲಿಯಾಗುತ್ತಿವೆ.
ಜಾಗತಿಕ ತೈಲ ಮಾರುಕಟ್ಟೆಗೂ ಕಂಟಕ ಈಗಾಗಲೇ ಕೊರೊನಾ ಕಾಟಕ್ಕೆ ಬೇಸತ್ತಿರುವ ತೈಲ ಮಾರುಕಟ್ಟೆಗೆ ಮತ್ತೊಂದು ಸವಾಲು ಎದುರಾಗಿದೆ. ಈಗ ನಗೊರ್ನೊ ಹಾಗೂ ಕರಬಾಖ್ ವಿಚಾರವಾಗಿ ಭುಗಿಲೆದ್ದಿರುವ ಯುದ್ಧ ದಕ್ಷಿಣ ಕಾಕಸಸ್ ಪ್ರದೇಶದಲ್ಲಿ ಅಸ್ಥಿರತೆ ಮೂಡುವಂತೆ ಮಾಡಿದೆ. ದಕ್ಷಿಣ ಕಾಕಸಸ್ ಜಾಗತಿಕ ತೈಲ ಮಾರುಕಟ್ಟೆಗೆ ತೈಲ ಮತ್ತು ಅನಿಲ ಸಾಗಿಸೋದಕ್ಕೆ ಕಾರಿಡಾರ್ ಆಗಿದೆ. ದಕ್ಷಿಣ ಕಾಕಸಸ್ ಸುತ್ತಮುತ್ತಲ ಪ್ರದೇಶದಲ್ಲಿ ಯುದ್ಧ ನಡೆಯುತ್ತಿರುವಾಗ ಇಲ್ಲಿ ಸ್ಥಿರತೆ ನೆಲೆಸುವುದು, ಶಾಂತಿಯುತ ವ್ಯಾಪಾರ ನಡೆಯುವುದು ಕಷ್ಟಕರ. ಇದು ಜಾಗತಿಕ ತೈಲ ಮಾರುಕಟ್ಟೆಗೆ ಮತ್ತೆ ಕಂಟಕ ಎದುರಾಗುವ ಮುನ್ಸೂಚನೆ ನೀಡಿದೆ.
‘ಬನ್ನಿ ಮಾತಾಡೋಣ’ ಅಂತು ರಷ್ಯಾ..! :
ನಿಮಗೆ ತಿಳಿದಿರಲಿ ಇಡೀ ಜಗತ್ತಿನ ಯಾವ ದೇಶವೂ ಹೊಂದಿರಲಾರದಷ್ಟು ಭೂಪ್ರದೇಶ ಸೋವಿಯತ್‌ನ ಪಾಲಾಗಿತ್ತು. ಸುಮಾರು 22 ಮಿಲಿಯನ್ ಸ್ಕ್ವೇರ್ ಕಿಲೋಮೀಟರ್ ಅಂದರೆ 2 ಅಮೆರಿಕ ಅಥವಾ 2 ಕೆನಡಾ ದೇಶಗಳಷ್ಟು ಅಥವಾ ಅದಕ್ಕಿಂತಲೂ ಹೆಚ್ಚಿನ ಭೂಮಿಯನ್ನು ಆಗ ಸೋವಿಯತ್ ಯೂನಿಯನ್ ಹೊಂದಿತ್ತು. ಅಂದು ಸೋವಿಯತ್ ಭಾಗವಾಗಿದ್ದ ಅರ್ಮೇನಿಯ ಮತ್ತು ಅಜೆರ್ಬೈಜಾನ್ ರಾಜ್ಯ ಅಥವಾ ಸೋವಿಯತ್‌ನ ಪ್ರಾಂತೀಯ ಸ್ಥಾನಮಾನ ಪಡೆದಿದ್ದವು. 1991ರಲ್ಲಿ ಸೋವಿಯತ್ ವಿಭಜನೆ ಆದಾಗ ಅರ್ಮೇನಿಯ ಹಾಗೂ ಅಜೆರ್ಬೈಜಾನ್ ದೂರಾದವು. ಬಳಿಕ ಎರಡೂ ರಾಷ್ಟ್ರಗಳು ತುಂಡು ಭೂಮಿಗೆ ಕಚ್ಚಾಡುತ್ತಿವೆ. ಹೀಗಾಗಿ ರಷ್ಯಾ ಅಧ್ಯಕ್ಷ ಪುಟಿನ್ ಎರಡೂ ದೇಶಗಳ ನಾಯಕರಿಗೆ ಕರೆ ಮಾಡಿದ್ದು, ಸಂಧಾನಕ್ಕೆ ಬನ್ನಿ ಎಂದು ತಿಳಿಸಿದ್ದರು. ಆದರೆ ಸೊಕ್ಕು ಬಿಡದ ಅರ್ಮೇನಿಯಾ-ಅಜೆರ್ಬೈಜಾನ್ ನಾಯಕರು ಸಂಧಾನಕ್ಕೆ ಇನ್ನೂ ಒಪ್ಪಿಗೆ ಸೂಚಿಸಿಲ್ಲ.