ಕೊಚ್ಚಿ: ಕೇರಳ ಹೈಕೋರ್ಟ್‍ಮೊದಲ ಮಲೆಯಾಳಿ ಮುಖ್ಯ ನ್ಯಾಯಮೂರ್ತಿ ಕೆ.ಕೆ.ಉಷಾ 81 ನೇ ವಯಸ್ಸಿನಲ್ಲಿ ನಿನ್ನೆ ನಿಧನರಾದರು. ಅವರು 2000-2001ರವರೆಗೆ ಕೇರಳ ಹೈಕೋರ್ಟ್‍ನ ಮುಖ್ಯ ನ್ಯಾಯಮೂರ್ತಿಯಾಗಿದ್ದರು. 1991 ರಿಂದ 2001 ರವರೆಗೆ ಹೈಕೋರ್ಟ್‍ನಲ್ಲಿ ಸೇವೆ ಸಲ್ಲಿಸಿದರು.
ವಕೀಲೆಯಾಗಿ ಕಾರ್ಯನಿರ್ವಹಿಸಿದ ಬಳಿಕ ನ್ಯಾಯಾಧೀಶರು ಮತ್ತು ಮುಖ್ಯ ನ್ಯಾಯಮೂರ್ತಿಗಳಾದ ಮೊದಲ ಮಹಿಳೆ ಉಷಾ ಆಗಿರುವರೆಂಬುದು ಹೆಗ್ಗಳಿಕೆ. ಅವರು 1961 ರಲ್ಲಿ ವಕೀಲರಾಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದ್ದರು. 1979 ರಲ್ಲಿ ಅವರನ್ನು ಕೇರಳ ಹೈಕೋರ್ಟ್‍ನಲ್ಲಿ ಸರ್ಕಾರಿ ಪ್ಲೀಡರ್ ಆಗಿ ನೇಮಿಸಲಾಯಿತು. ಅವರು 1991ರ ಫೆಬ್ರವರಿ ಯಿಂದ 2001 ಜುಲೈ 3 ರ ವರೆಗೆ ಹೈಕೋರ್ಟ್‍ನ ನ್ಯಾಯಾಧೀಶೆ ಮತ್ತು ಮುಖ್ಯ ನ್ಯಾಯಮೂರ್ತಿಗಳಾಗಿದ್ದರು.
ಹೈಕೋರ್ಟ್‍ನಿಂದ ನಿವೃತ್ತಿಯಾದ ನಂತರ 2001 ರಿಂದ 2004 ರವರೆಗೆ ದೆಹಲಿ ಮೂಲದ ಕಸ್ಟಮ್ಸ್, ಅಬಕಾರಿ ಮತ್ತು ಸೇವಾ ತೆರಿಗೆ ಮೇಲ್ಮನವಿ ನ್ಯಾಯಮಂಡಳಿಯ ಅಧ್ಯಕ್ಷರಾಗಿದ್ದರು.
ಉಷಾ ಅವರ ನಿಧನಕ್ಕೆ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಸಂತಾಪ ಸೂಚಿಸಿದ್ದಾರೆ. ನ್ಯಾಯಮೂರ್ತಿ ಉಷಾ ಅವರು ನ್ಯಾಯಾಧೀಶರು ಮತ್ತು ನ್ಯಾಯಾಂಗ ಕ್ಷೇತ್ರಕ್ಕೆ ಹೆಚ್ಚಿನ ಕೊಡುಗೆ ನೀಡಿದ ವಕೀಲರು ಎಂದು ಮುಖ್ಯಮಂತ್ರಿ ಹೇಳಿದರು. ಅವರ ಮತ್ತೊಂದು ವಿಶಿಷ್ಟತೆಯೆಂದರೆ ಸೌಮ್ಯ ವರ್ತನೆ ಮತ್ತು ಬೆಂಬಲ ಮನೋಭಾವ. ಸ್ತ್ರೀವಾದಿ ದೃಷ್ಟಿಕೋನದಿಂದ ಮಹಿಳೆಯರ ಸಮಸ್ಯೆಗಳ ಬಗ್ಗೆ ಅವರ ಕೊಡುಗೆಗಳು ಗಮನಾರ್ಹವಾಗಿದೆ ಎಂದು ಸಿಎಂ ಹೇಳಿದರು.