ತಿರುವನಂತಪುರ: ಎಂ.ಶಿವಶಂಕರ್ ಬಂಧನಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ರಾಜೀನಾಮೆ ನೀಡುವ ಪ್ರಮೇಯವೇ ಇಲ್ಲ ಎಂದು ಸಿಪಿಎಂ ರಾಜ್ಯ ಸಮಿತಿ ಸದಸ್ಯ ಎಂ.ವಿ.ಗೋವಿಂದನ್ ಮಾಸ್ತರ್ ಹೇಳಿದ್ದಾರೆ. ಶಿವಶಂಕರ್ ಬಂಧನದ ಬಗ್ಗೆ ಸರ್ಕಾರ ಮತ್ತು ಸಿಪಿಎಂ ಚಿಂತಿಸುತ್ತಿಲ್ಲ. ಈ ಕುರಿತು ಪಿಣರಾಯಿ ವಿಜಯನ್ ರಾಜೀನಾಮೆ ನೀಡುವ ಪ್ರಶ್ನೆಯೇ ಇಲ್ಲ. ರಾಜೀನಾಮೆಯು ಪಕ್ಷದ ಕಾರ್ಯಸೂಚಿಯಲ್ಲಿ ಇಲ್ಲ. ಪ್ರತಿಪಕ್ಷಗಳು ಮಾಡಿರುವ ಆರೋಪಗಳು ಆಧಾರರಹಿತವಾಗಿವೆ ಎಂದರು.
ಚಿನ್ನ ಸಾಗಾಣಿಕೆಯ ಸರಂಜಾಮುಗಳ ವಿಲೇವಾರಿಗೆ ಶಿವಶಂಕರ್ ಅವರನ್ನು ಸಿಎಂ ಕಚೇರಿಯಿಂದ ಕಳಿಸಲಾಯಿತು ಎಂಬ ಆರೋಪವು ಅಸಂಬದ್ಧವಾಗಿದೆ. ಸಿಪಿಎಂ ಪ್ರಸ್ತುತ ಯಾವುದೇ ಆರೋಪಗಳನ್ನು ಗಣನೆಗೆ ತೆಗೆಯುತ್ತಿಲ್ಲ. ನ್ಯಾಯಾಲಯವು ತೀರ್ಮಾನದ ಬಳಿಕ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು ಎಂದು ಅವರು ಪ್ರತಿಕ್ರಿಯಿಸಿರುವರು.
ಶಿವಶಂಕರ್ ತಪ್ಪಿತಸ್ಥನಾಗಿದ್ದರೆ ಶಿಕ್ಷೆಯಾಗಲಿ. ಆದರೆ ಪಕ್ಷದಿಂದ ಏನು ತಪ್ಪಾಗಿದೆ? ಸಿಪಿಎಂ ಈ ಬಗ್ಗೆ ಹೆದರುವುದಿಲ್ಲ. "ಹೆಚ್ಚಿನ ಪುರಾವೆಗಳಿದ್ದರೆ, ಯಾವುದೇ ಆರೋಪಿಗಳನ್ನು ರಕ್ಷಿಸುವ ಧಾವಂತವನ್ನು ಸಿಪಿಎಂ ಹೊಂದಿಲ್ಲ" ಎಂದು ಅವರು ಹೇಳಿದರು.
ಶಿವಶಂಕರ್ ಅವರನ್ನು ಬಂಧಿಸಲಾಯಿತು ಎಂಬುದು ನಿಜ. ಪ್ರಕರಣವು ಕಾನೂನು ಆಧಾರದಲ್ಲಿ ತನಿಖೆಯಾಗಲಿ. ತೀರ್ಪು ಅದರ ಭಾಗವಾಗಿ ಬರಲಿ, ಆದರೆ ಇದರಲ್ಲಿ ಎಡ ಪಕ್ಷದ ಸರ್ಕಾರವಾಗಲಿ, ಮುಖ್ಯಮಂತ್ರಿಯಾಗಲಿ ಯಾವುದೇ ಪಾತ್ರವಿಲ್ಲ ಎಂಬುದು ಸ್ಪಷ್ಟವಾಗಲಿದೆ ಎಂದು ಅವರು ತಿಳಿಸಿದರು.
ಪಿಣರಾಯಿ ವಿಜಯನ್ ಅವರಿಗೆ ಪ್ರಕರಣದಲ್ಲಿ ನೈತಿಕ ಹೊಣೆಗಾರಿಕೆ ಎಂಬ ವಾದ ಕೇಳುತ್ತಿದೆ. ಹಾಗಾದಲ್ಲಿ ಪ್ರಧಾನಿ ಮೋದಿಗೂ ಅಷ್ಟೇ ನೈತಿಕ ಜವಾಬ್ದಾರಿ ಇದರಲ್ಲಿದೆ. ಯಾಕೆಂದರೆ ಐಎಎಸ್ ಮತ್ತು ಐಪಿಎಸ್ ಅಧಿಕಾರಿ ವರ್ಗವು ಕೇಂದ್ರ ಕೇಡರ್ ನೇತೃತ್ವದಲ್ಲಿರುವುದನ್ನು ಮರೆಯಬಾರದು ಎಂದು ಅವರು ಹೇಳಿದರು.