ಕಾಸರಗೋಡು: ಕೋವಿಡ್‍ನಿಂದ ಮರಣ ಸಂಖ್ಯೆ ಹೆಚ್ಚಳಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರು ಜಾಗರೂಕತೆ ಪಾಲಿಸಬೇಕು ಎಂದು ಜಿಲ್ಲಾ ವೈದ್ಯಾಧಿಕಾರಿ (ಆರೋಗ್ಯ) ಡಾ.ಎ.ವಿ.ರಾಮದಾಸ್ ತಿಳಿಸಿದರು.
ಫೆ.3ರಂದು ಮೊದಲ ಕೇಸು ವರದಿಯಾದಂದಿನಿಂದ ಜು.17 ರ ವರೆಗೆ ಕಾಸರಗೋಡು ಜಿಲ್ಲೆಯಲ್ಲಿ ಒಂದೇ ಒಂದು ಮರಣವೂ ವರದಿಯಾಗಿರಲಿಲ್ಲ. ಆದರೆ ಜು.17ರಿಂದ ಅ.15ರ ವರೆಗೆ ಜಿಲ್ಲೆಯಲ್ಲಿ 142 ಮರಣಗಳು ವರದಿಯಾಗಿವೆ. ಮರಣ ಹೊಂದಿರುವವರಲ್ಲಿ ಬಹುಪಾಲು ಮಂದಿ 60 ವರ್ಷಕ್ಕಿಂತ ಅಧಿಕ ವಯೋಮಾನದವರು, ಇನ್ನಿತರ ಗಂಭೀರ ಸ್ವರೂಪದ ರೋಗಗಳಿಂದ ಬಳಲುತ್ತಿದ್ದವರು. ಈ ಹಿನ್ನೆಲೆಯಲ್ಲಿ ಹಿರಿಯರು ಮತ್ತು ಗಂಭೀರ ರೋಗಗಳಿಂದ ಬಳಲುತ್ತಿರುವವರು ಹೆಚ್ಚುವರಿ ಜಾಗ್ರತೆ ವಹಿಸಬೇಕು. ಇವರ ಕುಟುಂಬದ ಸದಸ್ಯರಿಗೆ ಅಧಿಕ ಎಚ್ಚರಿಕೆ ಬೇಕು. ಈ ಮನೆಗಳ ಮಂದಿ ಹೊರಗಿಳಿಯುವುದನ್ನು ಗರಿಷ್ಠ ಪ್ರಮಾಣದಲ್ಲಿ ಕಡಿಮೆ ಮಾಡಬೇಕು. ಇತರರೊಂದಿಗೆ ಸಂಪರ್ಕವನ್ನು ಬಹಳಷ್ಟು ಪ್ರಮಾಣದಲ್ಲಿ ಕಡಿಮೆ ಮಾಡಬೇಕು. ಸಾಮಾಜಿಕ ಅಂತರ ಕಾಯ್ದುಕೊಳ್ಳುವಿಕೆ, ಸಾಬೂನು, ನೀರು ಬಳಸಿ ಶುಚೀಕರಣ, ಮಾಸ್ಕ್ ಧಾರಣೆ ಇತ್ಯಾದಿಗಳನ್ನು ಕಡ್ಡಾಯ ಗೊಳಿಸಬೇಕು. ಸುಲಭದಲ್ಲಿ ಜೀರ್ಣವಾಗುವ ಆಹಾರವನ್ನೇ ಸೇವಿಸಬೇಕು, ಧಾರಾಳ ನೀರು ಕುಡಿಯಬೇಕು, ತರಕಾರಿ-ಹಣ್ಣು ಅಧಿಕವಾಗಿ ಸೇವಿಸಬೇಕು, ತೀರ ಅನಿವಾರ್ಯ ಪರಿಸ್ಥಿತಿಯಲ್ಲಿ ಆಸ್ಪತ್ರೆಗೆ ತೆರಳಬೇಕು.
ದೂರವಾಣಿ ಮುಖಾಂತರ ಯಾ ಇ-ಸಂಜೀವಿನಿ ಯೋಜನೆಯ ವೆಬ್ http://esanjeevani.in/ಬಳಸಿ ವೈದ್ಯರ ಸೇವೆ ಪಡೆಯಬೇಕು. ಜೀವನ ಶೈಲಿ ರೋಗ ಹೊಂದಿರುವವರು ವೈದ್ಯರು ತಿಳಿಸುವ ನಿಬಂಧನೆಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ವಾಂತಿ, ಹಸಿವಿಲ್ಲದಿರುವಿಕೆ, ಹೊಟ್ಟೆಯ ಕೆಳಭಾಗದಲ್ಲಿ ನೋವು ಇತ್ಯಾದಿ ಕಂಡುಬಂದಲ್ಲಿ ತತ್‍ಕ್ಷಣ ಆಸ್ಪತ್ರೆಗೆ ಭೇಟಿ ನೀಡಬೇಕು ಎಂದು ಜಿಲ್ಲಾ ವೈದ್ಯಾಧಿಕಾರಿ ತಿಳಿಸಿರುವರು.