ವಾಷಿಂಗ್ಟನ್: ಟೈಮ್ ಮ್ಯಾಗಝಿನ್ ಸುಮಾರು 100 ವರ್ಷಗಳ ಇತಿಹಾಸದಲ್ಲಿ ಮೊದಲ ಬಾರಿಗೆ ನವೆಂಬರ್ 2ರ ತನ್ನ ಅವಳಿ ಸಂಚಿಕೆಗಳ ಮುಖಪುಟದ ಲೋಗೊದ ಸ್ಥಳದಲ್ಲಿ VOTE (ಮತ ಚಲಾಯಿಸಿ)ಎಂಬ ಪದವನ್ನು ಮುದ್ರಿಸಿ ಗಮನ ಸೆಳೆದಿದೆ.
ಆಧುನಿಕ ಇತಿಹಾಸದಲ್ಲಿ ಅತ್ಯಂತ ವಿಭಜಿತ ಹಾಗೂ ನಿರ್ಣಾಯಕ ಚುನಾವಣೆಗಳಲ್ಲಿ ಒಂದೆಂದು ಪರಿಗಣಿಸಲ್ಪಟ್ಟಿರುವ ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ತಮ್ಮ ಮತದಾನದ ಹಕ್ಕನ್ನು ಚಲಾಯಿಸುವಂತೆ ನಾಗರಿಕರನ್ನು ಒತ್ತಾಯಿಸಿ ಟೈಮ್ ಮುಖ್ಯ ಸಂಪಾದಕ ಹಾಗೂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಎಡ್ವರ್ಡ್ ಫೆಲ್ಸೆಂಥಾಲ್ ಪತ್ರವನ್ನು ಬರೆದಿದ್ದಾರೆ. ವರ್ಷಗಳ ನೋವು, ಸಂಕಷ್ಟ, ಗೊಂದಲ ಹಾಗೂ ಕಷ್ಟವನ್ನು ಬದಲಾಯಿಸಲು ಒಂದು ಅಪೂರ್ವ ಅವಕಾಶ ಇದಾಗಿದೆ ಎಂದು ಅವರು ಪತ್ರದಲ್ಲಿ ತಿಳಿಸಿದ್ದಾರೆ.
ಈ ಐತಿಹಾಸಿಕ ಕ್ಷಣವನ್ನು ಗುರುತಿಸಲು ಸುಮಾರು 100 ವರ್ಷಗಳ ಇತಿಹಾಸದಲ್ಲಿ ಮೊದಲ ಬಾರಿ ನಮ್ಮ ಅಮೆರಿಕ ಆವೃತ್ತಿಯ ಮುಖಪುಟದಲ್ಲಿ ನಮ್ಮ ಲಾಂಛನವನ್ನು ಬದಲಾಯಿಸಿದ್ದೇವೆ ಎಂದು ಎಡ್ವರ್ಡ್ ಫೆಲ್ಸೆಂಥಾಲ್ ವಿವರಿಸಿದ್ದಾರೆ.
ಪತ್ರಿಕೆಯ ಮುಖಪುಟದಲ್ಲಿನ ಕಲಾಕೃತಿಯನ್ನು ಶೆಪರ್ಡ್ ಫೈರಿ ರಚಿಸಿದ್ದಾರೆ. ಶೆಪರ್ಡ್ 2008ರಲ್ಲಿ ಅಂದಿನ ಅಧ್ಯಕ್ಷೀಯ ಅಭ್ಯರ್ಥಿ ಬರಾಕ್ ಒಬಾಮಾಗೋಸ್ಕರ ಪ್ರಸಿದ್ಧ ಹೋಪ್ ಪೋಸ್ಟರ್ ನ್ನು ರಚಿಸಿದ್ದರು.