ತಿರುವನಂತಪುರ: ತಿರುವನಂತಪುರ ಚಿನ್ನ ಕಳ್ಳಸಾಗಣೆ ಪ್ರಕರಣದಲ್ಲಿ ಸಿಲುಕಿರುವ ಮಾಜಿ ಪ್ರಧಾನ ಕಾರ್ಯದರ್ಶಿ ಮತ್ತು ಆರೋಪಿ ಎಂ.ಶಿವಶಂಕರ್ ಅವರನ್ನು ರಕ್ಷಿಸಲಾಗುತ್ತಿದೆ ಎಂಬ ಆರೋಪ ಆಧಾರರಹಿತವಾಗಿದೆ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದ್ದಾರೆ.
ಮಾಧ್ಯಮಗಳ ಒಂದು ವಿಭಾಗ ಮತ್ತು ಪ್ರತಿಪಕ್ಷಗಳು ಸರ್ಕಾರದ ವಿರುದ್ಧ ಷಡ್ಯಂತ್ರಗಳ ಮೂಲಕ ತೇಜೋವಧೆಗೆ ಪ್ರಯತ್ನಿಸುತ್ತಿವೆ. ತಪ್ಪು ಮಾಡಿರುವ ವ್ಯಕ್ತಿ ಎಷ್ಟು ಉನ್ನತ ಸ್ಥಾನದಲ್ಲಿದ್ದರೂ ತಪ್ಪಿಗೆ ಶಿಕ್ಷೆಯಾಗಬೇಕು ಎಂಬ ಅಭಿಪ್ರಾಯ ಸರ್ಕಾರದ್ದಾಗಿದೆ ಎಂದು ಸಿಎಂ ಹೇಳಿದರು. ಅಪರಾಧದಲ್ಲಿ ಭಾಗಿಯಾಗಿರುವ ಶಂಕಿತರನ್ನು ಬಂಧಿಸಲು ಮತ್ತು ಪ್ರಶ್ನಿಸಲು ಕೇಂದ್ರ ಏಜೆನ್ಸಿಗಳಿಗೆ ಅಧಿಕಾರವಿದೆ. ಈ ಕ್ರಮವನ್ನು ಯಾರೂ ಕಾನೂನುಬದ್ಧವಾಗಿ ತಡೆಯಲು ಸಾಧ್ಯವಿಲ್ಲ ಎಂದು ಅವರು ಹೇಳಿದರು.
ಮುಖ್ಯ ಕಾರ್ಯದರ್ಶಿ ಮಟ್ಟದಲ್ಲಿ ವಿಚಾರಣೆಯ ಭಾಗವಾಗಿ ಶಿವಶಂಕರ್ ಅವರನ್ನು ಅಮಾನತುಗೊಳಿಸಲಾಗಿದೆ. ಮುಖ್ಯಮಂತ್ರಿಗಳು ಅವರನ್ನು ಕಾರ್ಯದರ್ಶಿ ಹುದ್ದೆಯಿಂದ ತೆಗೆದುಹಾಕಿದ್ದಾರೆ ಮತ್ತು ಮುಖ್ಯ ಕಾರ್ಯದರ್ಶಿ ಮಟ್ಟದಲ್ಲಿ ವಿಚಾರಣೆ ನಡೆಸಿದ್ದಾರೆ ಎಂದು ಮುಖ್ಯಮಂತ್ರಿ ಹೇಳಿದರು.
ತಿರುವನಂತಪುರ ಚಿನ್ನ ಕಳ್ಳಸಾಗಣೆ ಪ್ರಕರಣದ ಆರಂಭದಿಂದಲೂ ರಾಜ್ಯ ಸರ್ಕಾರ ಸಹಕಾರ ನೀಡುತ್ತಿದೆ. ಈ ಪ್ರಕರಣವನ್ನು ಮೂರು ತನಿಖಾ ಸಂಸ್ಥೆಗಳು ತನಿಖೆ ನಡೆಸುತ್ತಿವೆ. ಅವರಲ್ಲಿ ಯಾರೂ ಈವರೆಗೆ ಯಾವುದೇ ದೂರು ನೀಡಿಲ್ಲ ಎಂದು ಸಿಎಂ ಹೇಳಿದರು. ನಿನ್ನೆಯ ಕೋವಿಡ್ ಪರಿಶೀಲನಾ ಸಭೆಯ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಸಿಎಂ ಅವರು ತನಿಖಾ ಸಂಸ್ಥೆಗಳು ತಮ್ಮ ದಾರಿಯಲ್ಲಿ ಸಾಗಲು ಯಾವುದೇ ಅಡ್ಡಿಯಿಲ್ಲ ಎಂದು ಹೇಳಿದರು.
ಪ್ರಸ್ತುತ ಆಸ್ಪತ್ರೆಗೆ ದಾಖಲಾಗಿರುವ ಎಂ.ಶಿವಶಂಕರ್ ಅವರಿಗೆ ಬಲವಾದ ಆರೋಗ್ಯ ಸಮಸ್ಯೆಗಳೇನೂ ಇಲ್ಲ ಎಂದು ವೈದ್ಯಕೀಯ ಮಂಡಳಿ ಸ್ಪಷ್ಟಪಡಿಸಿದ್ದರಿಂದ ಶಿವಶಂಕರ್ ಅವರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ. ಜೊತೆಗೆ ಶಿವಶಂಕರ್ ಅವರನ್ನು ಶುಕ್ರವಾರದ ತನಕ ಬಂಧಿಸದಂತೆ ಹೈಕೋರ್ಟ್ ತಡೆಯಾಜ್ಞೆ ನೀಡಿದ್ದರಿಂದ ಶಿವಶಂಕ ಅವರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಯಿತು ಎಂದು ತಿಳಿದುಬಂದಿದೆ.