ಕೋಲ್ಕತಾ: ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಶೀಘ್ರದಲ್ಲೇ ದೇಶಾದ್ಯಂತ ಜಾರಿಗೊಳಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಹೇಳಿದ್ದಾರೆ. ಉತ್ತರ ಬಂಗಾಳದ ಸಾಮಾಜಿಕ ಸಂಸ್ಥೆಗಳ ಸಭೆಯನ್ನುದ್ದೇಶಿಸಿ ವರು ನಿನ್ನೆ ಮಾತನಾಡಿದರು. ಕೋವಿಡ್ ಕಾರಣಕ್ಕೆ ಪೌರತ್ವ ಕಾಯ್ದೆ ಅನುಷ್ಠಾನ ಕಾರ್ಯ ವಿಳಂಬವಾಯಿತು ಎಂದು ತಿಳಿಸಿದ್ದಾರೆ.
ಮಮತಾ ಬ್ಯಾನರ್ಜಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರ ರಾಜ್ಯದಲ್ಲಿ ಡಿವೈಡ್ ಅಂಡ್ ರೂಲ್ ನೀತಿ ಅನುಸರಿಸುತ್ತಿದೆ. ಪೌರತ್ವ ಕಾಯ್ದೆ ವಿರುದ್ಧ ಜನರನ್ನು ತಪ್ಪು ದಾರಿಗೆ ಎಳೆಯುತ್ತಿದೆ ಎಂದು ಟೀಕಿಸಿದ ಜಯಪ್ರಕಾಶ್ ನಡ್ಡಾ, ಈ ಕಾಯ್ದೆಯಿಂದ ನಿಮಗೆಲ್ಲರಿಗೂ ಲಾಭವಾಗಲಿದೆ. ಸಂಸತ್?ನಲ್ಲಿ ಇದಕ್ಕೆ ಅನುಮೋದನೆ ಸಿಕ್ಕಿದೆ. ನಾವು ಇದಕ್ಕೆ ಬದ್ಧರಾಗಿದ್ದೇವೆ ಎಂದಿದ್ದಾರೆ.
ಕೋವಿಡ್-19 ಸಾಂಕ್ರಾಮಿಕ ರೋಗದ ಕಾರಣದಿಂದ ಸಿಎಎ ಅನುಷ್ಠಾನ ವಿಳಂಬಗೊಂಡಿದೆ. ಈಗ ಪರಿಸ್ಥಿತಿ ಸುಧಾರಿಸುತ್ತಿರುವುದರಿಂದ ಕಾಯ್ದೆ ಜಾರಿಗೆ ಕ್ರಮಗಳನ್ನ ಕೈಗೊಳ್ಳಲಾಗುತ್ತಿದೆ. ನಿಯಮಗಳನ್ನ ರಚಿಸಲಾಗುತ್ತಿದೆ. ಶೀಘ್ರದಲ್ಲೇ ಕಾಯ್ದೆ ಜಾರಿಯಾಗುತ್ತದೆ ಎಂದು ನಡ್ಡಾ ತಿಳಿಸಿದ್ದಾರೆ.
ಪಶ್ಚಿಮ ಬಂಗಾಳ ಸರ್ಕಾರ ಇಲ್ಲಿಯ ಹಿಂದೂ ಸಮುದಾಯವನ್ನ ನೋಯಿಸಿದೆ. ಈಗ ಮುಖ್ಯಮಂತ್ರಿ ತನ್ನ ಕುರ್ಚಿ ಉಳಿಸಿಕೊಳ್ಳಲು ಹಿಂದೂಗಳ ಓಲೈಕೆ ಮಾಡುತ್ತಿದ್ಧಾರೆ. ಇದೆಲ್ಲಾ ವೋಟ್ ಬ್ಯಾಂಕ್ ರಾಜಕಾರಣ. ಮಮತಾ ಬ್ಯಾನರ್ಜಿ ಅವರಿಗೆ ಜನಸೇವೆಯ ಉದ್ದೇಶ ಇಲ್ಲದಿರುವುದರಿಂದ ಒಡೆದು ಆಳುವ ನೀತಿ ಮೇಲೆ ನಂಬಿಕೆ ಇಟ್ಟುಕೊಂಡಿದ್ದಾರೆ. ಯಾವುದೇ ತಂತ್ರ ಉಪಯೋಗಿಸಿಯಾದರೂ ಆಡಳಿತ ನಡೆಸುವುದು ಅವರ ಉದ್ದೇಶ. ಬಿಜೆಪಿಯದ್ದು ಬ್ರಾತೃತ್ವದ ತತ್ವವಾಗಿದೆ ಎಂದು ನಡ್ಡಾ ಅಭಿಪ್ರಾಯಪಟ್ಟಿದ್ದಾರೆ.
ಕೇಂದ್ರ ಸರ್ಕಾರದ ಯೋಜನೆಗಳನ್ನ ರಾಜ್ಯ ಸರ್ಕಾರ ತಡೆಯುತ್ತಾ ಬಂದಿದೆ. ಮಮತಾ ಬ್ಯಾನರ್ಜಿ ಆಗಲ್ಲ, ಆಗಲ್ಲ ಅಂತಾರೆ. ಇವತ್ತು ನಾವು ಇದು ಆಗುತ್ತೆ ಆಗುತ್ತೆ ಎನ್ನುತ್ತಿದ್ದೇವೆ. ಆಯುಷ್ಮಾನ್ ಭಾರತ್ ಮತ್ತು ಪಿಎಂ ಕಿಸಾನ್ ಯೋಜನೆಯನ್ನು ತಡೆಯುವ ಮೂಲಕ ಬಂಗಾಳದ ಕೋಟ್ಯಂತರ ರೈತರು ಮತ್ತು ಬಡವರಿಗೆ ವಂಚೆ ಮಾಡಿದ್ದಾರೆ. ನೀವು ನಮ್ಮನ್ನು ಅಧಿಕಾರಕ್ಕೆ ತಂದರೆ ಈ ಯೋಜನೆಗಳನ್ನ ಜಾರಿಗೆ ತರುತ್ತೇವೆ ಎಂದು ಭರವಸೆ ನೀಡಿದ್ದಾರೆ.
ರಾಜ್ಯದಲ್ಲಿ ನಡೆಯುತ್ತಿರುವ ಹಿಂಸಾಚಾರ ಹಾಗೂ ಟಿಎಂಸಿ ಸರ್ಕಾರದ ಭ್ರಷ್ಟಾಚಾರದಿಂದ ಜನರು ರೋಸಿ ಹೋಗಿದ್ದಾರೆ. ಚುನಾವಣೆಯಲ್ಲಿ ಜನರು ಬಿಜೆಪಿಯನ್ನು ಗೆಲ್ಲಿಸಲಿದ್ದಾರೆ ಎಂದು ನಡ್ಡಾ ವಿಶ್ವಾಸ ವ್ಯಕ್ತಪಡಿಸಿದ್ದಾರೆ.