ಕೊಚ್ಚಿ: ತಿರುವನಂತಪುರ ಚಿನ್ನ ಕಳ್ಳಸಾಗಣೆ ಪ್ರಕರಣದಲ್ಲಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಮಾಜಿ ಪ್ರಧಾನ ಕಾರ್ಯದರ್ಶಿ ಎಂ.ಶಿವಶಂಕರ್ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ನ್ಯಾಯಾಲಯ ಪರಿಶೋಧಿಸಿ ತೀರ್ಪು ನೀಡಿದೆ. ಚಿನ್ನ ಕಳ್ಳಸಾಗಣೆ ಪ್ರಕರಣದಲ್ಲಿ ಶಿವಶಂಕರ್ ಆರೋಪಿಯಲ್ಲ ಎಂದು ಎನ್ ಐ ಎ ನ್ಯಾಯಾಲಯಕ್ಕೆ ತಿಳಿಸಿದೆ. ಈ ಪ್ರಕರಣದಲ್ಲಿ ಅವರು ಪ್ರತಿವಾದಿಯಲ್ಲದ ಕಾರಣ ಅವರನ್ನು ಇನ್ನು ಬಂಧಿಸಬೇಕಾಗಿಲ್ಲ. ಆದ್ದರಿಂದ, ನಿರೀಕ್ಷಿತ ಜಾಮೀನು ಪರಿಗಣಿಸುವ ಅಗತ್ಯವಿಲ್ಲ ಎಂದು ಎನ್ ಐ ಎ ನ್ಯಾಯಾಲಯಕ್ಕೆ ತಿಳಿಸಿದೆ.
ಶಿವಶಂಕರ್ ಅವರ ವಕೀಲರು ಎನ್ ಐ ಎ ವಾದವನ್ನು ಒಪ್ಪಿದ್ದು ಜೊತೆಗೆ ನ್ಯಾಯಾಲಯವು ಅವರ ಪರವಾಗಿ ತೀರ್ಪು ನೀಡಿತು. ಯಾವುದೇ ಪರಿಸ್ಥಿತಿಯಲ್ಲಿ ಯಾವುದೇ ಬಂಧನ ಕ್ರಮಗಳಿದ್ದರೆ ನ್ಯಾಯಾಲಯಕ್ಕೆ ಸೂಚಿಸಲಾಗುತ್ತದೆ. ಇತರ ಬಂಧನಗಳು ಇರುವುದಿಲ್ಲ ಎಂದು ಎನ್ ಐ ಎ ಪ್ರಾಸಿಕ್ಯೂಟರ್ ಹೇಳಿದರು.
ಕಸ್ಟಮ್ಸ್ ಮತ್ತು ಜಾರಿ ನಿರ್ದೇಶನಾಲಯದ ಪ್ರಕರಣಗಳಲ್ಲಿ ಹೈಕೋರ್ಟ್‍ನಲ್ಲಿ ದಾಖಲಾಗುವ ಜಾಮೀನು ಅರ್ಜಿಗಳ ಕುರಿತು ಶುಕ್ರವಾರ ತೀರ್ಪು ಬರಲಿದೆ. ಶಿವಶಂಕರ್ ಅವರ ಜಾಮೀನು ವಿರುದ್ಧ ಜಾರಿ ನಿರ್ದೇಶನಾಲಯ ಬುಧವಾರ ಪ್ರತಿ ಅಫಿಡವಿಟ್ ಸಲ್ಲಿಸಿತ್ತು. ಪ್ರಕರಣದ ತನಿಖೆ ಪ್ರಗತಿಯಲ್ಲಿದೆ. ಶಿವಶಂಕರ್ ಅವರನ್ನು ವಶಕ್ಕೆ ಪಡೆದು ಅಗತ್ಯವಿದ್ದರೆ ಪ್ರಶ್ನಿಸಬಹುದು ಎಂದು ಅಫಿಡವಿಟ್ ನಲ್ಲಿ ತಿಳಿಸಲಾಗಿದೆ. ಶಿವಶಂಕರ್ ಅವರನ್ನು ಶುಕ್ರವಾರದ ವರೆಗೆ ಪ್ರಶ್ನಿಸಬಾರದು ಎಂದು ಹೈಕೋರ್ಟ್ ನಿರ್ದೇಶಿಸಿತ್ತು. ಪ್ರಕರಣದ ತನಿಖೆಯಲ್ಲಿ ಭಾಗಿಯಾಗಿರುವ ಎರಡೂ ಏಜೆನ್ಸಿಗಳ ವಾದಗಳನ್ನು ಕೇಳಿದ ಬಳಿಕ ಬಂಧನ ಸೇರಿದಂತೆ ಕ್ರಮಗಳ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ ಎಂಬುದು ಇತ್ತೀಚಿನ ಮಾಹಿತಿಯಾಗಿದೆ.
ಶಿವಶಂಕರ್ ಗೆ ಬಾಧಿಸಿರುವ ಅನಾರೋಗ್ಯವು ಸುಳ್ಳಿನ ನಾಟಕ ಎಂದು ಕಸ್ಟಮ್ಸ್ ಈ ಹಿಂದೆ ತಿಳಿಸಿತ್ತು. ಪೂರ್ವ ನಿರ್ಧರಿತವಾಗಿ ಬಂಧನದಿಂದ ತಪ್ಪಿಸಲು ಆಸ್ಪತ್ರೆಗೆ ದಾಖಲಿಸಲಾಯಿತು. ಬಂಧನ ಪ್ರಕ್ರಿಯೆಯನ್ನು ಮೊದಲೇ ನಿರೀಕ್ಷಿಸಲಾಗಿತ್ತು, ಅದಕ್ಕಾಗಿಯೇ ಅವರ ಪತ್ನಿ ಕೆಲಸ ಮಾಡುವ ಖಾಸಗಿ ಆಸ್ಪತ್ರೆಯಲ್ಲೇ ದಾಖಲಾದರು ಎಂದು ಕಸ್ಟಮ್ಸ್ ಬೊಟ್ಟುಮಾಡಿತ್ತು. ಹೈಕೋರ್ಟ್‍ನಲ್ಲಿ ಕಸ್ಟಮ್ಸ್ ನೀಡಿದ ಅಫಿಡವಿಟ್‍ನಲ್ಲಿ ಶಿವಶಂಕರ್ ಅವರಿಗೆ ಬೆನ್ನು ನೋವು ಮಾತ್ರ ಇದೆ. ಅಗತ್ಯದ ಔಷಧಿ ಸೇವಿಸಿದರೆ ಗುಣಮುಖರಾದಾರೆಂದು ತಿಳಿಸಲಾಗಿದೆ.