ಮೈಸೂರು: ಶಾಲಾ ಮಕ್ಕಳಿಗೆ ಒಲಿಂಪಿಯಾಡ್ ಪರೀಕ್ಷೆ ನಡೆಸುವ ಸೈನ್ಸ್ ಒಲಿಂಪಿಯಾಡ್ ಫೌಂಡೇಶನ್, ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಆನ್ ಲೈನ್ ಪರೀಕ್ಷೆಯನ್ನು ಘೋಷಿಸಿದೆ.
ಪ್ರತಿ ವರ್ಷ ವಿಶ್ವದಾದ್ಯಂತ ಲಕ್ಷಾಂತರ ವಿದ್ಯಾರ್ಥಿಗಳು ಸೈನ್ಸ್ ಒಲಿಂಪಿಯಾಡ್ ಫೌಂಡೇಶನ್ ಪರೀಕ್ಷೆಯಲ್ಲಿ ಹಾಜರಾಗುತ್ತಿದ್ದರು. ಕಳೆದ ವರ್ಷ ಮೈಸೂರಿನ ಶಾಲೆಗಳಿಂದ ಸುಮಾರು 24 ಸಾವಿರ ವಿದ್ಯಾರ್ಥಿಗಳು ಒಲಿಂಪಿಯಾಡ್ ಪರೀಕ್ಷೆಯಲ್ಲಿ ಹಾಜರಾಗಿದ್ದರು. ಆದಾಗ್ಯೂ, ವಿದ್ಯಾರ್ಥಿಗಳ ಆರೋಗ್ಯದ ದೃಷ್ಟಿಯಿಂದ ಈ ವರ್ಷ ಎಲ್ಲಾ ವಿದ್ಯಾರ್ಥಿಗಳು ಮನೆಯಿಂದಲೇ ಪರೀಕ್ಷೆಗೆ ಹಾಜರಾಗಬಹುದಾಗಿದೆ.
ಈ ವರ್ಷ ನಾಲ್ಕು ಒಲಿಂಪಿಯಾಡ್ ಪರೀಕ್ಷೆಗಳನ್ನು ಸೈನ್ಸ್ ಒಲಿಂಪಿಯಾಡ್ ಫೌಂಡೇಶನ್ ನಡೆಸಲಿದೆ. ಇಂಟರ್ ನ್ಯಾಷನಲ್ ಜನರಲ್ ನಾಲ್ಡೆಜ್, ಇಂಟರ್ ನ್ಯಾಷನಲ್ ಇಂಗ್ಲೀಷ್, ರಾಷ್ಟ್ರೀಯ ಸೈನ್ಸ್ ಒಲಿಂಪಿಯಾಡ್ ಮತ್ತು ಅಂತಾರಾಷ್ಟ್ರೀಯ ಗಣಿತ ಶಾಸ್ತ್ರ ಒಲಿಂಪಿಯಾಡ್ ಪರೀಕ್ಷೆಗಳು ಇದಾಗಿವೆ.
ಒಲಿಂಪಿಯಾಡ್ ಪರೀಕ್ಷೆ ಬರೆಯಲು ಬಯಸುವ ವಿದ್ಯಾರ್ಥಿಗಳು ವೆಬ್ ಸೈಟ್ https://ors.sofworld.org/studentregistration ನಲ್ಲಿ ಹೆಸರು ನೋಂದಣಿ ಮಾಡಿಕೊಳ್ಳಬಹುದು.
2019-20ರಲ್ಲಿ 32 ರಾಷ್ಟ್ರಗಳಿಂದ ಸುಮಾರು 56 ಸಾವಿರ ಶಾಲೆಗಳು ಆರು ಒಲಿಂಪಿಯಾಡ್ ಪರೀಕ್ಷೆಗೆ ನೋಂದಣಿ ಮಾಡಿಕೊಂಡಿದ್ದವು. ಲಕ್ಷಾಂತರ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ವಿಜೇತ ಶಾಲೆಗಳಿಗೆ ಪ್ರತಿಯೊಂದು ತರಗತಿ, ರಾಜ್ಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಶಸ್ತಿ, ಬಹುಮಾನ ಮತ್ತು ಸ್ಕಾಲರ್ ಶಿಫ್ ನೀಡಲಾಗಿತ್ತು ಎಂದು ಸೈನ್ಸ್ ಒಲಿಂಪಿಯಾಡ್ ಫೌಂಡೇಶನ್ ಸ್ಥಾಪಕ ಮಹಬೀರ್ ಸಿಂಗ್ ತಿಳಿಸಿದ್ದಾರೆ.
ನಾಲ್ಕು ಒಲಿಂಪಿಯಾಡ್ ಪರೀಕ್ಷೆಗಳ ವೇಳಾಪಟ್ಟಿ ಇಂತಿದೆ.
* ನವೆಂಬರ್ 7-8, ನವೆಂಬರ್ 21-22 ಮತ್ತು ಡಿಸೆಂಬರ್ 5-6 ರಂದು ಇಂಟರ್ ನ್ಯಾಷನಲ್ ಜನರಲ್ ನಾಲ್ಡೆಜ್ ಒಲಿಂಪಿಯಾಡ್ ಪರೀಕ್ಷೆಗಳು ನಡೆಯಲಿವೆ.
* ನವೆಂಬರ್ 14-15, ನವೆಂಬರ್ 28-29 ಮತ್ತು ಡಿಸೆಂಬರ್ 12-13 ರಂದು ಇಂಟರ್ ನ್ಯಾಷನಲ್ ಇಂಗ್ಲೀಷ್ ಒಲಿಂಪಿಯಾಡ್ ಪರೀಕ್ಷೆಗಳು ಜರುಗಲಿವೆ.
* ಡಿಸೆಂಬರ್ 19-20, ಜನವರಿ 9-10 ಮತ್ತು ಜನವರಿ 30-31ರವರೆಗೂ ರಾಷ್ಟ್ರೀಯ ವಿಜ್ಞಾನ ಒಲಿಂಪಿಯಾಡ್ ಮತ್ತು ಡಿಸೆಂಬರ್ 26-27, ಜನವರಿ 2-3 ಮತ್ತು ಜನವರಿ 23-24 ರಂದು ಇಂಟರ್ ನ್ಯಾಷನಲ್ ಗಣಿತಶಾಸ್ತ್ರ ಒಲಿಂಪಿಯಾಡ್ ಪರೀಕ್ಷೆಗಳು ನಡೆಯಲಿವೆ.