ತಿರುವನಂತಪುರ: ರಾಜ್ಯದಲ್ಲಿ ಹೆಚ್ಚುತ್ತಿರುವ ಕೋವಿಡ್ ಪ್ರಕರಣಗಳ ಹಿನ್ನೆಲೆಯಲ್ಲಿ ಸೂಚನೆಗಳನ್ನು ಪಾಲಿಸದಿದ್ದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದ್ದಾರೆ. ಅನುಸರಿಸಲು ಹಿಂದೇಟು-ಆಲಸ್ಯಗೈದರೆ ದಂಡ ಹೆಚ್ಚಿಸಲಾಗುತ್ತದೆ. ಮಾಸ್ಕ್ ಧರಿಸದವರಿಗೆ ದಂಡ ಹೆಚ್ಚಿಸಲಾಗುವುದು. ಅಂಗಡಿಗಳಲ್ಲಿ ಸಾಮಾಜಿಕ ದೂರವನ್ನು ಕಾಯ್ದುಕೊಳ್ಳಬೇಕು ಮತ್ತು ಸ್ಯಾನಿಟೈಜರ್ ಖಾತ್ರಿಪಡಿಸಿಕೊಳ್ಳಬೇಕು ಎಂದು ಸಿಎಂ ಹೇಳಿರುವರು.
ಸಾಮಗ್ರಿಗಳನ್ನು ಖರೀದಿಸಲು ಅಂಗಡಿಗಳಿಗೆ ಬರುವವರು ಕೈಗವಸು ಧರಿಸಬೇಕು. ಇದಲ್ಲದೆ, ಕೈಗಳನ್ನು ಸ್ಯಾನಿಟೈಜರ್ ಬಳಸಿ ನೈರ್ಮಲ್ಯಗೊಳಿಸಬೇಕು. ಮಾಸ್ಕ್ ಕಡ್ಡಾಯವಾಗಿ ಧರಿಸಲೇ ಬೇಕು. ಅಂಗಡಿಗಳಲ್ಲಿ ಸಾಮಾಜಿಕ ಅಂತರವನ್ನು ಜಾಗರೂಕರಾಗಿ ಕಾಯ್ದುಕೊಳ್ಳಬೇಕು. ಈ ನಿಬಂಧನೆಗಳು ಈ ಹಿಂದೆ ಜಾರಿಯಲ್ಲಿದ್ದರೂ ಸಾರ್ವಜನಿಕರಿಂದ ಈಗ ನಿರ್ಲಕ್ಷ್ಯ ಕ್ರಮಗಳು ಕಂಡುಬರುತ್ತಿದೆ. ಆದರೆ ಇನ್ನು ಯಾವುದೇ ವಿನಾಯಿತಿಗಳನ್ನು ನೀಡಲಾಗುವುದಿಲ್ಲ. ತೀವ್ರ ಕ್ರಮ ಎದುರಿಸಬೇಕಾಗುತ್ತದೆ ಎಂದು ಸಿಎಂ ಹೇಳಿದರು.
ಅಂಗಡಿಗಳಲ್ಲಿ ಅಗತ್ಯದ ನಿಯಂತ್ರಣಗಳನ್ನು ವಿಧಿಸುವುದು ಅಂಗಡಿಯವರ ಜವಾಬ್ದಾರಿಯಾಗಿದೆ. ಹಾಗೊಂದು ವೇಳೆ ಅಲಕ್ಷ್ಯವಹಿಸುವುದು ಕಂಡುಬಂದರೆ ಅಂಗಡಿಗಳನ್ನು ಮುಚ್ಚಲಾಗುತ್ತದೆ. ಮತ್ತು ವಿಚಾರಣೆಯನ್ನು ಎದುರಿಸಬೇಕಾಗುತ್ತದೆ. ಜನರು ಅಸಮಾಧಾನಗೊಂಡಿರುವುದು ಹೌದಾದರೂ ನಿರ್ಬಂಧಗಳನ್ನು ಜವಾಬ್ದಾರಿಯುತರಾಗಿ ಪಾಲಿಸುವುದು ತುರ್ತು ಅಗತ್ಯ. ಕೋವಿಡ್ ನಿಯಮಗಳನ್ನು ಪಾಲಿಸುವುದು ಮುಖ್ಯ. ಹಲವರು ಕೋವಿಡ್ ಸೋಂಕನ್ನು ಲಘುವಾಗಿ ತೆಗೆದುಕೊಂಡು ನಿಯಮಗಳನ್ನು ಪಾಲಿಸದಿರುವುದು ಗಮನಕ್ಕೆ ಬಂದಿದೆ. ಕೋವಿಡ್ ವಿರುದ್ಧ ಯಾವುದೇ ಔಷಧಿಗಳು ಪ್ರಸ್ತುತ ಕಂಡುಬಂದಿಲ್ಲವಾದರೂ ಶೀಘ್ರದಲ್ಲೇ ಕಠಿಣ ನಿಯಂತ್ರಣ ಕ್ರಮಗಳನ್ನು ತೆಗೆದುಕೊಳ್ಳುವ ಅಗತ್ಯವಿದೆ ಎಂದು ಸಿಎಂ ಹೇಳಿದರು.
ಕೋವಿಡ್ ಸೋಂಕು ವ್ಯಕ್ತಿಗಳಲ್ಲಿ ಪ್ರವೇಶಿಸಿ ಎಷ್ಟು ದಿನ ಇರುತ್ತಾವೆಂದು ಮಾಹಿತಿ ಸ್ಪಷ್ಟವಾಗಿ ಇಲ್ಲದಿರುವುದರಿಂದ ಅಂತಹ ಪ್ರದೇಶಗಳನ್ನು ಮುಚ್ಚದಿರಲು ಸಾಧ್ಯವಿಲ್ಲ. ಜನರು ಮುನ್ನೆಚ್ಚರಿಕೆ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಕೋವಿಡ್ ಪರೀಕ್ಷೆಗಳ ಸಂಖ್ಯೆ ಹೆಚ್ಚಾಗುತ್ತಿದೆ. ಸೋಂಕಿತ ಜನರನ್ನು ಹುಡುಕುವುದು ಬಹಳ ಮುಖ್ಯ. ನಾವು ಈ ಹಿಂದೆ ತೋರಿಸಿದ ಕೋವಿಡ್ ಜಾಗರೂಕತೆ ಮತ್ತು ಕಾಳಜಿಯನ್ನು ಪುನಃ ಪಡೆದುಕೊಳ್ಳಬೇಕು ಎಂದು ಅವರು ಹೇಳಿದರು. ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ 90 ಶಾಲಾ ಕಟ್ಟಡಗಳನ್ನು ಉದ್ಘಾಟಿಸಿ 54 ಶಾಲಾ ಕಟ್ಟಡಗಳಿಗೆ ಶಿಲಾನ್ಯಾಸ ಮಾಡಿದ ನಂತರ ಮುಖ್ಯಮಂತ್ರಿ ಮಾತನಾಡಿದರು.