ಕಾಸರಗೋಡು: ಕೊರೋನಾ ಸೋಂಕು ವಿರುದ್ಧ ಜನಜಾಗೃತಿ ಮೂಡಿಸುವ, ಪ್ರತಿರೋಧ ಚಟುವಟಿಕೆಗಳಿಗೆ ಕೈಗನ್ನಡಿ ಹಿಡಿಯುವ ವಿಶಿಷ್ಟ ಕನ್ನಡ ಕಿರುಚಿತ್ರ "ಕುಣಿಕೆ" ಬಿಡುಗಡೆಗೊಂಡಿದೆ.
ಕೇರಳ ತುಳು ಅಕಾಡೆಮಿ ಅಧ್ಯಕ್ಷ, ಹಿರಿಯ ರಂಗಕರ್ಮಿ ಉಮೇಶ್ ಎಂ.ಸಾಲ್ಯಾನ್ ನಿರ್ದೇಶಿಸಿ, ಪ್ರಧಾನ ಪಾತ್ರ ವಹಿಸಿದ್ದಾರೆ. ಕಾಸರಗೋಡು ಜಿಲ್ಲೆಯ ಅನೇಕ ಪ್ರತಿಭಾವಂತ ಕಲಾವಿದರು ವಿವಿಧ ಪಾತ್ರಗಳಲ್ಲಿ ಮತ್ತು ಹಿನ್ನೆಲೆಯಲ್ಲಿ ಭಾಗವಹಿಸಿದ್ದಾರೆ.
ಐ.ಇ.ಸಿ. ಸಂಚಲನ ಸಮಿತಿ ವತಿಯಿಂದ ಸಿದ್ಧಪಡಿಸಲಾದ ಈ ಕಿರುಚಿತ್ರವನ್ನು ಬುಧವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಬಿಡುಗಡೆಗೊಳಿಸಿದರು. ನಿರ್ದೇಶಕ ಉಮೇಶ್ ಎಂ.ಸಾಲ್ಯಾನ್, ಹೆಚ್ಚುವರಿ ದಂಡನಾಧಿಕಾರಿ ಎನ್.ದೇವಿದಾಸ್, ಜಿಲ್ಲಾ ವಾರ್ತಾಧಿಕಾರಿ ಮಧುಸೂದನನ್ ಎಂ. ಮೊದಲಾದವರು ಉಪಸ್ಥಿತರಿದ್ದರು.