ನವದೆಹಲಿ: ಪೂರ್ವ ಲಡಾಕ್‌ನ ಗಡಿ ಪ್ರದೇಶದಲ್ಲಿ ಭಿನ್ನಾಭಿಪ್ರಾಯಗಳನ್ನು ವಿವಾದವನ್ನಾಗಿಸದೆ ಇರಲು ಮತ್ತು ಶಾಂತಿ ಮತ್ತು ಸೌಹಾರ್ದತೆಯನ್ನು ಕಾಪಾಡಲು ಭಾರತ ಮತ್ತು ಚೀನಾದ ಉನ್ನತ ಸೇನಾ ಕಮಾಂಡರ್‌ಗಳು ಒಪ್ಪಿಕೊಂಡಿದ್ದಾರೆ.
ಗಡಿ ಘರ್ಷಣೆಯಿಂದ ಉಂಟಾಗಿರುವ ಉದ್ವಿಗ್ನತೆಯನ್ನು ಕಡಿಮೆ ಮಾಡಲು ಉಭಯ ದೇಶಗಳ ಕಮಾಂಡರ್‌ಗಳು ಇಂದು ಪೂರ್ವ ಲಡಾಕ್‌ನ ಭಾರತದ ಬದಿಯಲ್ಲಿರುವ ಚುಶುಲ್‌ನಲ್ಲಿ ಏಳನೇ ಸುತ್ತಿನ ಮಾತುಕತೆ ನಡೆಸಿದರು.
ಸುಮಾರು 12 ಗಂಟೆಗಳ ಕಾಲ ನಡೆದ ಸಭೆಯಲ್ಲಿ ವಾಸ್ತವಿಕ ಗಡಿ ನಿಯಂತ್ರಣ ರೇಖೆಯ ಉದ್ದಕ್ಕೂ ಎಲ್ಲಾ ಘರ್ಷಣಾ ಬಿಂದುಗಳಿಂದ ಸಂಪೂರ್ಣ ಸೇನಾ ನಿಷ್ಕ್ರಿಯಗೊಳಿಸುವಿಕೆ ಬಗ್ಗೆ ಮತ್ತು ಉಲ್ಬಣಗೊಳ್ಳುವ ಮಾರ್ಗಗಳ ಕುರಿತುು ಚರ್ಚಿಸಿದರು.
ಮಾತುಕತೆಯ ನಂತರ ಅವರು ಜಂಟಿ ಹೇಳಿಕೆ ಹೊರಡಿಸಿದ್ದು, ಸೇನಾ ಮತ್ತು ರಾಜತಾಂತ್ರಿಕ ಮಾರ್ಗಗಳ ಮೂಲಕ ಸಂವಾದ ಮತ್ತು ಸಂವಹನವನ್ನು ಕಾಪಾಡಿಕೊಳ್ಳಲು ಎರಡೂ ಸೇನೆಗಳು ಒಪ್ಪಿಕೊಂಡಿವೆ ಮತ್ತು ಸಾಧ್ಯವಾದಷ್ಟು ಬೇಗ ಪರಸ್ಪರ ಸ್ವೀಕಾರಾರ್ಹ ಪರಿಹಾರ ಕಂಡುಕೊಳ್ಳಲಾಗುವುದು ಎಂದಿದ್ದಾರೆ.
ಈ ಮಾತುಕತೆಯು "ಸಕಾರಾತ್ಮಕ, ರಚನಾತ್ಮಕ" ಮತ್ತು ಪರಸ್ಪರರ ನಿಲುವುಗಳ ಬಗ್ಗೆ ತಿಳುವಳಿಕೆಯನ್ನು ಹೆಚ್ಚಿಸಿವೆ ಎಂದು ಉಭಯ ದೇಶಗಳ ಕಮಾಂಡರ್ ಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸಂಪೂರ್ಣವಾಗಿ ಸೈನ್ಯವನ್ನು ಹಿಂಪಡೆದಾಗ ಮಾತ್ರ ಉದ್ವಿಗ್ನತೆ ಕಡಿಮೆ ಮಾಡಲು ಸಾಧ್ಯ ಎಂಬ ಸತ್ಯವನ್ನು ಚೀನಾ ಸೇನೆಗೆ ಮನವರಿಕೆ ಮಾಡಿಕೊಡಲಾಗಿದ್ದು, ರಾಜತಾಂತ್ರಿಕ ಮಾತುಕತೆಗಳಿಗೆ ಪೂರಕವಾಗಿ ಗಡಿಯಲ್ಲಿ ಸೇನಾ ಚಟುವಟಿಕೆಗಳಿಗೆ ಕಡಿವಾಣ ಹಾಕುವುದು ಸೂಕ್ತ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.