ಬದಿಯಡ್ಕ: ಸುರಕ್ಷತೆಯ ಭಾಗವಾಗಿ ಜಿಲ್ಲೆಯಲ್ಲಿಯೇ ನೀರ್ಚಾಲು ಪೇಟೆಯು ಇತರೆಡೆಗಳಿಗೆ ಮಾದರಿಯಾಗಿದೆ. ಕಾಸರಗೋಡು ಜಿಲ್ಲೆಯ ಇತರ ಯಾವುದೇ ಕಡೆ ಇಲ್ಲದ ಅತ್ಯಾಧುನಿಕ ರೀತಿಯ, ಉತ್ಕøಷ್ಟ ದರ್ಜೆಯ ಸಿಸಿಟಿವಿ ಕಣ್ಗಾವಲಿನಲ್ಲಿರಿಸಲು ಸಹಕರಿಸಿದ ವ್ಯಾಪಾರಿ ಸಂಘಟನೆಗಳು ಪೊಲೀಸರೊಂದಿಗೆ ಕೈಜೋಡಿಸಿರುವುದು ಶ್ಲಾಘನೀಯ ಎಂದು ಬದಿಯಡ್ಕ ಪೊಲೀಸ್ ಠಾಣಾಧಿಕಾರಿ ಎ. ಅನೀಶ್ ಹೇಳಿದರು.
ಗುರುವಾರ ನೀರ್ಚಾಲು ಪೇಟೆಯಲ್ಲಿ ವ್ಯಾಪಾರಿಗಳು, ಸಹಕಾರಿ ಸಂಘ ಸಂಸ್ಥೆಗಳು, ಇನ್ನಿತರ ಸಂಘಟನೆಗಳು, ಕೇರಳ ವ್ಯಾಪಾರಿ ವ್ಯವಸಾಯಿ ಏಕೋಪನ ಸಮಿತಿಯ ನೀರ್ಚಾಲು ಘಟಕದ ನೇತೃತ್ವದಲ್ಲಿ ಅಳವಡಿಸಿದ ಸಿಸಿ ಕ್ಯಾಮರಾ ಉದ್ಘಾಟನೆ ಹಾಗೂ ಬದಿಯಡ್ಕ ಪೊಲೀಸ್ ಠಾಣೆಗೆ ಹಸ್ತಾಂತರ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ನೀರ್ಚಾಲು ಪೇಟೆಯ ಆಗುಹೋಗುಗಳನ್ನು ಬದಿಯಡ್ಕದಲ್ಲಿರುವ ಪೊಲೀಸ್ ಠಾಣೆಯಲ್ಲಿಯೇ ಗಮನಿಸಲು ಅನುಕೂಲವಾಗುವ ವ್ಯವಸ್ಥೆ ಇದಾಗಿದೆ ಎಂದು ಅವರು ತಿಳಿಸಿದರು. ಬದಿಯಡ್ಕ ಗ್ರಾಮಪಂಚಾಯಿತಿ ಅಧ್ಯಕ್ಷ ಕೆ.ಎನ್.ಕೃಷ್ಣ ಭಟ್ ಉದ್ಘಾಟಿಸಿ ಮಾತನಾಡಿ, ಕಳ್ಳತನ, ದರೋಡೆ ಪ್ರಕರಣಗಳಿಗೆ ಕಡಿವಾಣ ಹಾಕುವಲ್ಲಿ ಸಿಸಿಟಿವಿ ವ್ಯವಸ್ಥೆಯು ಪ್ರಾಧಾನ್ಯತೆಯನ್ನು ಪಡೆಯಲಿದೆ. ದಿನೇ ದಿನೇ ಬೆಳೆಯುತ್ತಿರುವ ಪೇಟೆಯ ಸುರಕ್ಷತೆ ಅನಿವಾರ್ಯವಾಗಿದೆ ಎಂದರು.
ಕೇರಳ ವ್ಯಾಪಾರಿ ವ್ಯವಸಾಯಿ ಏಕೋಪನ ಸಮಿತಿ ನೀರ್ಚಾಲು ಘಟಕದ ಅಧ್ಯಕ್ಷ ಸುಬ್ರಹ್ಮಣ್ಯ ಭಟ್ ಎಂ. ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದರು. ಮಹಾಜನ ವಿದ್ಯಾಸಂಸ್ಥೆಯ ಪ್ರಬಂಧಕ ಜಯದೇವ ಖಂಡಿಗೆ, ಗ್ರಾಪಂ ಸದಸ್ಯರುಗಳಾದ ಡಿ.ಶಂಕರ, ಪ್ರೇಮ ಕುಮಾರಿ ಶುಭಾಶಂಸನೆಗೈದರು. ವ್ಯಾಪಾರಿ ಸಂಘಟನಾ ಕಾರ್ಯದರ್ಶಿ ರವಿ ಖಂಡಿಗೆ ಸ್ವಾಗತಿಸಿ, ಕೋಶಾಧಿಕಾರಿ ಪ್ರಶಾಂತ ಪೈ ವಂದಿಸಿದರು. ಸ್ಥಳೀಯ ಪ್ರಮುಖರಾದ ಗಣೇಶ ಕೃಷ್ಣ ಅಳಕ್ಕೆ ಉಪಸ್ಥಿತರಿದ್ದರು.