ಮಂಜೇಶ್ವರ: ಭಾರತೀಯ ಕಿಸಾನ್ ಸಂಘದ ಜಿಲ್ಲಾ ಪ್ರತಿನಿಧಿಗಳ ಸಮಾವೇಶವು ವೀಡಿಯೋ ಕಾನ್ಫರೆನ್ಸ್ ಮೂಲಕ ಸಮಾವೇಶಗೊಂಡಿತು.
ಕೇರಳ ಪ್ರಾಂತೀಯ ಸಂಘಟನಾ ಕಾರ್ಯದರ್ಶಿ ರಮೇಶ್ ಜಿ ಅವರು ಮಾತನಾಡಿ, ಕರ್ಷಕ ಬಿಲ್ ಮಸೂದೆ ಅನುಮೋದನೆಗೊಂಡಿದ್ದು ಇದರಿಂದ ದೇಶದ ಶೇ.95 ಕೃಷಿಕರಿಗೆ ಸಹಕಾರಿಯಾಗಲಿದೆ. ಕೃಷಿಕರು ತಮ್ಮ ಉತ್ಪನ್ನಗಳನ್ನು ಗರಿಷ್ಠ ಬೆಲೆಗೆ ತಮಗೆ ಬೇಕಾದಲ್ಲಿ ಮಾರಬಹುದು. ಶೇ.5 ಜನ ಮಾತ್ರ ಮಸೂದೆಯನ್ನು ವಿರೋಧಿಸುತ್ತಿರುವರು. 70 ವರ್ಷಗಳಿಂದ ದೇಶಗಳಲ್ಲಿ ಯಂತ್ರೋಪಕರಣಗಳು ಮೊಬೈಲ್ ಮುಂತಾದುವುಗಳನ್ನು ಚಿಕ್ಕ ರಾಷ್ಟ್ರಗಳಿಂದ ಆಮದು ಮಾಡುತ್ತಿರುವರು. ವಾಹನಗಳು, ಕೃಷಿ ಯಂತ್ರೋಪಕರಣಗಳು, ಔಷಧಿಗಳು, ರೈಲ್ವೆ ಯಂತ್ರಗಳು, ಇಲೆಕ್ಟ್ರಾನಿಕ್ ವಸ್ತುಗಳನ್ನು ಇಲ್ಲಿಯೇ ಉತ್ಪಾದಿಸುತ್ತಿದ್ದರೆ ಭಾರತದ ಕೋಟ್ಯಂತರ ಜನರಿಗೆ ಉದ್ಯೋಗ ಲಭಿಸುತ್ತಿತ್ತು. ಈಗ ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಪ್ರಬುದ್ಧ ಪ್ರಬಲ ಕ್ರಿಯಾಶೀಲ ಸರ್ಕಾರವಿದೆ. ಇವರು ದೇಶದ ಎಲ್ಲಾ ಆಶೋತ್ತರಗಳನ್ನು ಈಡೇರಿಸಲು ಕಂಕಣ ಬದ್ಧರಾಗಿರುವರು. ಇದಕ್ಕಾಗಿ ಮೋದಿಯವರಿಗೆ ಎಲ್ಲಾ ಪಕ್ಷಗಳು ತಂತ್ರಜ್ಞಾನವುಳ್ಳ ಪರಿಣತರು ವಿವಿಧ ಉದ್ಯಮಿಗಳು ಕೈ ಜೋಡಿಸಬೇಕಾಗಿದೆ ಎಂದು ತಿಳಿಸಿದರು.
ಕೇರಳ ಭಾ.ಕಿ.ಸಂ.ನ ಕಾರ್ಯದರ್ಶಿ ಸಹದೇವನ್ ಮಾತನಾಡಿ ಸಂಘವು ದೇಶದ ಅಭಿವೃದ್ಧಿಗಾಗಿ ಕೇಂದ್ರ ಸರ್ಕಾರದೊಂದಿಗೆ ಕೈ ಜೋಡಿಸುತ್ತಿದೆ. ಕೃಷಿಕರಿಗೆ ಬೇಕಾದ ಸಲಹೆಗಳನ್ನು ಭಾ.ಕಿ.ಸಂ ನೀಡಲು ಸಿದ್ಧವಿದೆ. ಭಾ.ಕಿ.ಸಂ ಕೃಷಿಕರ ಹಿತ ರಕ್ಷಿಸಲು ಲಕ್ಷಾಂತರ ಕೃಷಿಕರ ಸಹಿ ಸಂಗ್ರಹ ಅಭಿಯಾನದಲ್ಲಿ ಕೇಂದ್ರಕ್ಕೆ ಮೆಮೊರಾಂಡಮ್ ಕಳುಹಿಸಿತ್ತು. ಕೃಷಿಕರ ಹಿತಾಸಕ್ತಿಗಾಗಿ ಈ ಮಸೂದೆಯು ಲೋಕ ಸಭೆಯಲ್ಲಿ ಅಂಗೀಕಾರಗೊಂಡು ಜಾರಿಗೆ ಬಂದಿರುತ್ತವೆ ಎಂದರು.
ಪ್ರಾಂತ್ಯ ಉಪಾಧ್ಯಕ್ಷ ರಾಮಚಂದ್ರ ಮಾಸ್ತರ್, ಜೊತೆ ಕಾರ್ಯದರ್ಶಿ ಶಂಕರನ್, ಪ್ರಾಂತ್ಯ ಪ್ರಮುಖ್ ವಿನೋದ್, ಜಿಲ್ಲಾ ಕೋಶಾಧಿಕಾರಿ ಜಗದೀಶ್ ಶೆಟ್ಟಿ, ಜಿಲ್ಲಾಧ್ಯಕ್ಷ ನಾರಾಯಣನ್ ನಂಬಿಯಾರ್ ಉಪಸ್ಥಿತರಿದ್ದರು. ಭಾ.ಕಿ.ಸಂ.ನ ಮೀಂಜ ಘಟಕ ಕನ್ವೀನರ್ ಜಗನ್ನಾಥ ಮಾಸ್ತರ್ ಪಜಿಂಗಾರ್ ಸ್ವಾಗತಿಸಿ, ಜಿಲ್ಲಾ ಕಾರ್ಯದರ್ಶಿ ಸದಾನಂದ ಶೆಟ್ಟಿ ಕೊಮ್ಮಂಡ ವಂದಿಸಿದರು.