ಕೊಚ್ಚಿ: ಕೇರಳದ ವಾಟರ್ ಮೆಟ್ರೋ ಕನಸು ನನಸಾಗುತ್ತಿದೆ. ನಿರ್ಮಾಣ ಪ್ರಗತಿಯಲ್ಲಿದ್ದು ಮೊದಲ ವಾಟರ್ ಮೆಟ್ರೋ ಸೇವೆ ಜನವರಿಯಲ್ಲಿ ಪ್ರಾರಂಭವಾಗಲಿದೆ. ಕೊಚ್ಚಿ ಮೆಟ್ರೋ ರೈಲು ವಾಟರ್ ಮೆಟ್ರೋ ನಿರ್ಮಾಣವನ್ನು ಕೈಗೊಂಡಿದೆ.
ವರದಿಗಳ ಪ್ರಕಾರ, ವಾಟರ್ ಮೆಟ್ರೊದಲ್ಲಿ ಕೊಚ್ಚಿ ಮೆಟ್ರೋ ರೈಲು ನಿಲ್ದಾಣಗಳಂತೆಯೇ ವಿಶ್ವ ದರ್ಜೆಯ ನಿಲ್ದಾಣಗಳು ಮತ್ತು ಟಿಕೆಟಿಂಗ್ ಸೌಲಭ್ಯಗಳಿವೆ. ಕೊಚ್ಚಿ ಶಿಪ್ ಯಾರ್ಡ್ ವಾಟರ್ ಮೆಟ್ರೊಗಾಗಿ ಮೊದಲ ದೋಣಿ ನಿರ್ಮಿಸುತ್ತಿದೆ. 100 ಪ್ರಯಾಣಿಕರ ದೋಣಿ ಡಿಸೆಂಬರ್‍ನಲ್ಲಿ ಆಗಮಿಸುವ ನಿರೀಕ್ಷೆಯಿದೆ.
ಮಿಕ್ಕುಳಿದ ನಾಲ್ಕು ದೋಣಿಗಳ ನಿರ್ಮಾಣ ಕಾರ್ಯ ಪೂರ್ಣಗೊಂಡು ಮಾರ್ಚ್‍ನಲ್ಲಿ ಆಗಮಿಸಲಿವೆ. 100 ಪ್ರಯಾಣಿಕರ ಸಾಮಥ್ರ್ಯ ಹೊಂದಿರುವ 23 ದೋಣಿಗಳ ಸೇವೆಯನ್ನು ಪ್ರಾರಂಭಿಸಲು ನಿರ್ಧಾರ ತೆಗೆದುಕೊಳ್ಳಲಾಗಿದೆ. 50 ಪ್ರಯಾಣಿಕರ ಸಾಮಥ್ರ್ಯ ಹೊಂದಿರುವ 50 ಕ್ಕೂ ಹೆಚ್ಚು ದೋಣಿಗಳು ಸಹ ಸೇವೆಯಲ್ಲಿ ಇರಲಿವೆ. ನಿರ್ಮಾಣ ವೆಚ್ಚ ಸುಮಾರು 678 ಕೋಟಿ ರೂ. ಆಗಿದ್ದು ಯೋಜನೆಯ ಒಟ್ಟು ವೆಚ್ಚ `810 ಕೋಟಿ ಎಂದು ಅಂದಾಜಿಸಲಾಗಿದೆ.
ದೋಣಿಗಳ ದುರಸ್ತಿಗೆ ಅಗತ್ಯವಾದ ಬೋಟ್ ಯಾರ್ಡ್ ನ್ನು ಕಿನ್‍ಫ್ರಾದಲ್ಲಿ ಸ್ಥಾಪಿಸಲಾಗುವುದು. 18 ವಿವಿಧ ಮಾರ್ಗಗಳಲ್ಲಿ 38 ನಿಲ್ದಾಣಗಳ ನಿರ್ಮಾಣ ಪ್ರಾರಂಭವಾಗಲಿದೆ.
ಕೊಚ್ಚಿ ಮೆಟ್ರೊಗೆ ಸಂಪರ್ಕ ಕಲ್ಪಿಸಲಿರುವ ವಾಟರ್ ಮೆಟ್ರೋ ಯೋಜನೆಯು ಕೊಚ್ಚಿ ನಗರ ಸಾರಿಗೆಯನ್ನು ಸಾರ್ವಜನಿಕ ವ್ಯಾಪ್ತಿಗೆ ತರುವ ಗುರಿಯನ್ನು ಹೊಂದಿದೆ. ವಾಟರ್ ಮೆಟ್ರೋ ನಿರ್ಮಾಣ ಹಂತ ಹಂತವಾಗಿ ಪೂರ್ಣಗೊಳ್ಳಲಿದೆ. ಮೊದಲ ಹಂತದಲ್ಲಿ, ಏಳು ಮಾರ್ಗಗಳಲ್ಲಿ ಸೇವೆ ನಡೆಯಲಿದೆ.