ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ "ಸುಂದರವಾದ ಕಾರುಗಳನ್ನು" ಬಳಸುವುದನ್ನು ನಿಲ್ಲಿಸಿ ಎಲ್ಲರೂ ಸೈಕಲ್ ತುಳಿಯುವ ಸಮಯ ಬಂದಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ ಹೇಳಿದೆ.
ನೆರೆಯ ರಾಜ್ಯಗಳಲ್ಲಿ ಕೃಷಿ ತ್ಯಾಜ್ಯ ಸುಡುವಿಕೆಯಿಂದಾಗಿ ದೆಹಲಿ-ರಾಷ್ಟ್ರ ರಾಜಧಾನಿ ಪ್ರದೇಶದಲ್ಲಿ(ಎನ್‍ಸಿಆರ್) ಉಂಟಾಗುವ ಮಾಲಿನ್ಯಕ್ಕೆ ಸಂಬಂಧಿಸಿದ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎಸ್ ಎ ಬೊಬ್ಡೆ ನೇತೃತ್ವದ ನ್ಯಾಯಪೀಠ, ಕೆಲವು ತಜ್ಞರ ಪ್ರಕಾರ ಕೃಷಿ ತ್ಯಾಜ್ಯ ಸುಡುವುದು ಮಾಲಿನ್ಯದ ಮೂಲವಲ್ಲ ಎಂದು ಹೇಳಿದರು. "ನೀವು ನಿಮ್ಮ ಸುಂದರವಾದ ಕಾರುಗಳ ಬಳಕೆಯನ್ನು ನಿಲ್ಲಿಸಬೇಕೆಂದು ನಾವು ಬಯಸುತ್ತೇವೆ. ಆದರೆ ನೀವು ಇದನ್ನು ಇಷ್ಟಪಡುವುದಿಲ್ಲ. ನಾವೆಲ್ಲರೂ ಕಾರು, ಬೈಕ್ ಬಳಸುವುದನ್ನು ಬಿಟ್ಟು ಸೈಕಲ್‍ಗಳನ್ನು ಬಳಸಬೇಕು" ಎಂದು ಸಿಜೆಐ ಹೇಳಿದ್ದಾರೆ."ಕೆಲವು ತಜ್ಞರು ಅನೌಪಚಾರಿಕವಾಗಿ ನಮಗೆ ತಿಳಿಸಿದ್ದು, ದೆಹಲಿ ಮಾಲಿನ್ಯಕ್ಕೆ ಕೃಷಿ ತ್ಯಾಜ್ಯ ಸುಡುವುದು ಮಾತ್ರವಲ್ಲ, ಬೇರೆ ಕಾರಣಗಳಿಂದಲೂ ಮಾಲಿನ್ಯವಾಗುತ್ತಿದೆ" ಎಂದು ನ್ಯಾಯಮೂರ್ತಿಗಳಾದ ಎಸ್ ಎಸ್ ಬೋಪಣ್ಣ ಮತ್ತು ವಿ ರಾಮಸುಬ್ರಮಣಿಯನ್ ಅವರನ್ನೂ ಒಳಗೊಂಡ ನ್ಯಾಯಪೀಠ ಹೇಳಿದೆ.
ಈ ವೇಳೆ ಮಾಲಿನ್ಯವನ್ನು ನಿಗ್ರಹಿಸುವ ಕುರಿತು ಕೇಂದ್ರ ಸರ್ಕಾರವು ಸುಗ್ರೀವಾಜ್ಞೆಯನ್ನು ಹೊರಡಿಸಿದ್ದು, ಅದನ್ನು ಈಗಾಗಲೇ ಪ್ರಕಟಿಸಲಾಗಿದೆ ಎಂದು ಸೊಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ಸುಪ್ರೀಂ ಕೋರ್ಟ್ ತಿಳಿಸಿದರು.