ನವದೆಹಲಿ: ವಿಶ್ವ ಸಂಸ್ಥೆಯ ವರ್ಲ್ಡ್ ಫೂಡ್ ಪ್ರೋಗ್ರಾಮ್ (ಡಬ್ಲ್ಯೂಎಫ್ಪಿ) ಈ ವರ್ಷದ ನೊಬೆಲ್ ಶಾಂತಿ ಪುರಸ್ಕಾರ ಪಡೆದಿದೆ. ಸಂಘರ್ಷದ ಪ್ರದೇಶಗಳಲ್ಲಿ ಜನರ ಸಂಕಷ್ಟ ಮತ್ತು ಹಸಿವನ್ನು ನೀಗಿಸಲು ಮಾಡುತ್ತಿರುವ ಪ್ರಯತ್ನಗಳನ್ನ ಗುರುತಿಸಿ ಡಬ್ಲ್ಯೂಎಫ್ಪಿಗೆ ಈ ಗೌರವ ನೀಡಲಾಗಿದೆ. ನೊಬೆಲ್ ಶಾಂತಿ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದ್ದ ಮುನ್ನೂರಕ್ಕೂ ಹೆಚ್ಚು ವ್ಯಕ್ತಿಗಳು ಹಾಗೂ ಸಂಘಸಂಸ್ಥೆಗಳ ಮಧ್ಯೆ ನಾರ್ವೇಜಿಯನ್ ನೊಬೆಲ್ ಕಮಿಟಿ ವರ್ಲ್ಡ್ ಫೂಡ್ ಪ್ರೋಗ್ರಾಮ್ಗೆ ಈ ಗೌರವ ನೀಡಿದೆ.
“ಹಸಿವನ್ನು ಹೋಗಲಾಡಿಸಲು ಮಾಡಿರುವ ಅದರ ಪ್ರಯತ್ನಗಳು; ಸಂಘರ್ಷದ ಪ್ರದೇಶಗಳಲ್ಲಿ ಶಾಂತಿಗೆ ಪೂರಕವಾದ ವಾತಾವರಣ ನಿರ್ಮಿಸಲು ಮಾಡಿರುವ ಪ್ರಯತ್ನಗಳು; ಯುದ್ಧ ಮತ್ತು ಸಂಘರ್ಷದಲ್ಲಿ ಹಸಿವನ್ನು ಒಂದು ಆಯುಧವನ್ನಾಗಿ ಮಾಡಿಕೊಳ್ಳುವುದನ್ನು ತಪ್ಪಿಸಲು ಅದು ಹಾಕಿದ ಪರಿಶ್ರಮಗಳಿಗೆ ಈ ಶಾಂತಿ ಪ್ರಶಸ್ತಿ ನೀಡಿ ಗೌರವಿಸಿದ್ದೇವೆ” ಎಂದು ವಿಶ್ವ ಸಂಸ್ಥೆಯ ಡಬ್ಲ್ಯೂಎಫ್ಪಿ ಬಗ್ಗೆ ನಾರ್ವೇಜಿಯನ್ ನೊಬೆಲ್ ಕಮಿಟಿ ಅಧ್ಯಕ್ಷೆ ಬೆರಿಟ್ ರೀಸ್-ಆಂಡರ್ಸೆನ್ ಹೇಳಿದರು. ಕೊರೋನಾ ಸಾಂಕ್ರಾಮಿಕ ಪಿಡುಗು ಬಂದ ನಂತರ ವಿಶ್ವಾದ್ಯಂತ ಹಸಿವಿನ ಜನರ ಸಂಖ್ಯೆ ಹೆಚ್ಚಿದೆ. ಇವರಿಗೆ ನೆರವು ನೀಡುವ ಡಬ್ಲ್ಯೂಎಫ್ಪಿ ಮೊದಲಾದ ಮಾನವೀಯ ಸೇವಾ ಸಂಘ ಸಂಸ್ಥೆಗಳಿಗೆ ವಿವಿಧ ಸರ್ಕಾರಗಳು ಹಣಕಾಸು ನೆರವು ನೀಡುವುದು ಅಗತ್ಯವಾಗಿದೆ ಎಂದವರು ಕರೆ ನೀಡಿದರು. ಈ ಬಾರಿ ನೊಬೆಲ್ ಶಾಂತಿ ಪುರಸ್ಕಾರಕ್ಕೆ 211 ವ್ಯಕ್ತಿಗಳು ಹಾಗೂ 107 ಸಂಘ ಸಂಸ್ಥೆಗಳನ್ನ ನಾಮನಿರ್ದೇಶನ ಮಾಡಲಾಗಿತ್ತು. ಸ್ವೀಡನ್ ದೇಶದ ಗ್ರೆಟಾ ಥನ್ಬರ್ಗ್ ಅವರಿಗೆ ನೊಬೆಲ್ ಶಾಂತಿ ಪುರಸ್ಕಾರ ಲಭಿಸಬಹುದು ಎಂಬಂಥ ಸುದ್ದಿಗಳು ಪ್ರಶಸ್ತಿ ಘೋಷಣೆಯ ಕೊನೆಯ ಕ್ಷಣದವರೆಗೂ ಹರಿದಾಡುತ್ತಿದ್ದವು. ಅಂತಿಮವಾಗಿ, ವಿಶ್ವಸಂಸ್ಥೆಯ ಆಹಾರ ಸಂಸ್ಥೆಗೆ ನೊಬೆಲ್ ಪ್ರಶಸ್ತಿ ಸಂದಾಯವಾಗಿದೆ. ಈ ಪ್ರಶಸ್ತಿಯ ಜೊತೆಗೆ 10 ಮಿಲಿಯನ್ ಕ್ರೋನಾ (ಸ್ವೀಡನ್ ದೇಶದ ಕರೆನ್ಸಿ) ಹಣ, ಅಂದರೆ ಸುಮಾರು 8 ಕೋಟಿ ರೂಪಾಯಿ ನಗದು ಬಹುಮಾನ ಹಾಗೂ ಚಿನ್ನದ ಫಲಕವನ್ನ ನೀಡಲಾಗುತ್ತದೆ.
ಇದಕ್ಕೆ ಮುನ್ನ ವೈದ್ಯಕೀಯ, ಭೌತವಿಜ್ಞಾನ, ರಾಸಾಯನಿಕವಿಜ್ಞಾನ ಹಾಗೂ ಸಾಹಿತ್ಯ ಕ್ಷೇತ್ರಗಳಲ್ಲಿ ನೊಬೆಲ್ ಬಹುಮಾನಗಳನ್ನ ಪ್ರಕಟಿಸಲಾಗಿದೆ. ಡಿಸೆಂಬರ್ 10ರಂದು ನಾರ್ವೆ ದೇಶದ ಓಸ್ಲೋ ನಗರದಲ್ಲಿ ನಡೆಯುವ ಸರಳ ಸಮಾರಂಭದಲ್ಲಿ ನೂತನ ನೊಬೆಲ್ ವಿಜೇತರನ್ನ ಪುರಸ್ಕರಿಸಲಾಗುತ್ತದೆ.
ಇದಕ್ಕೆ ಮುನ್ನ ವೈದ್ಯಕೀಯ, ಭೌತವಿಜ್ಞಾನ, ರಾಸಾಯನಿಕವಿಜ್ಞಾನ ಹಾಗೂ ಸಾಹಿತ್ಯ ಕ್ಷೇತ್ರಗಳಲ್ಲಿ ನೊಬೆಲ್ ಬಹುಮಾನಗಳನ್ನ ಪ್ರಕಟಿಸಲಾಗಿದೆ. ಡಿಸೆಂಬರ್ 10ರಂದು ನಾರ್ವೆ ದೇಶದ ಓಸ್ಲೋ ನಗರದಲ್ಲಿ ನಡೆಯುವ ಸರಳ ಸಮಾರಂಭದಲ್ಲಿ ನೂತನ ನೊಬೆಲ್ ವಿಜೇತರನ್ನ ಪುರಸ್ಕರಿಸಲಾಗುತ್ತದೆ.