ತಿರುವನಂತಪುರ: ಕೇರಳದಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆ ಡಿಸೆಂಬರ್‌ನಲ್ಲಿ ನಡೆಯಲಿದೆ. ಈ ಬಗ್ಗೆ ರಾಜ್ಯ ಚುನಾವಣಾ ಆಯೋಗ ಸರ್ಕಾರಕ್ಕೆ ಪತ್ರ ಬರೆದಿದೆ. ಪತ್ರದಲ್ಲಿ ಚುನಾವಣೆಯ ದಿನಾಂಕವನ್ನು ಖಚಿತಪಡಿಸಿಲ್ಲ. ದಿನಾಂಕಗಳನ್ನು ನಂತರ ಪ್ರಕಟಿಸಲಾಗುವುದು ಎಂದು ಪತ್ರದಲ್ಲಿ ತಿಳಿಸಲಾಗಿದೆ.
ಸ್ಥಳೀಯ ಚುನಾವಣೆಗಳಿಗೆ ಸಂಬಂಧಿಸಿದಂತೆ ಆಯೋಗವು ಮುಖ್ಯ ಕಾರ್ಯದರ್ಶಿ ಮತ್ತು ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದಿದೆ. ಚುನಾವಣಾ ಕ್ರಮ ಕೈಗೊಳ್ಳುವಂತೆ ಆಯೋಗ ಸರ್ಕಾರವನ್ನು ಕೇಳಿದೆ.
ಡಿಸೆಂಬರ್ 31 ರೊಳಗೆ ಚುನಾವಣಾ ಪ್ರಕ್ರಿಯೆ ಪೂರ್ಣಗೊಳ್ಳಲಿದೆ ಎಂದು ಆಯೋಗ ತಿಳಿಸಿದೆ. ಆಯೋಗವು ಚುನಾವಣೆಗಳ ಬಗ್ಗೆ ನವೀಕರಿಸಿದ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ. ಪ್ರಚಾರಕ್ಕಾಗಿ ಬೋರ್ಡ್‌ಗಳು, ಬ್ಯಾನರ್‌ಗಳು ಮತ್ತು ಹೋರ್ಡಿಂಗ್‌ಗಳ ನಿಯೋಜನೆ ಕುರಿತು ಕಟ್ಟುನಿಟ್ಟಿನ ಸೂಚನೆಗಳಿವೆ.
ಪ್ಲಾಸ್ಟಿಕ್ ಮತ್ತು ಪಿವಿಸಿಯಂತಹ ವಸ್ತುಗಳನ್ನು ಪ್ರಚಾರಕ್ಕಾಗಿ ಬಳಸಬಾರದು. ಹತ್ತಿ ಬಟ್ಟೆ, ಕಾಗದ ಮತ್ತು ಪಾಲಿಥಿಲೀನ್ ಅನ್ನು ಬಳಸಬಹುದು. ಪ್ರಯಾಣಿಕರನ್ನು ತಡೆಯುವ ರೀತಿಯಲ್ಲಿ ಜಾಹೀರಾತುಗಳನ್ನು ರಸ್ತೆಯ ಕಾಲುದಾರಿಗಳಲ್ಲಿ ಅಥವಾ ರಸ್ತೆಯ ವಕ್ರಾಕೃತಿಗಳಲ್ಲಿ ಇರಿಸಬಾರದು. ಮತದಾನದ ಬಳಿಕ ಕೂಡಲೇ ಇವುಗಳನ್ನು ಸೂಕ್ತವಾಗಿ ವಿಲೇವಾರಿಗೊಳಿಸಬೇಕು ಎಂದು ಸೂಚನೆ ನೀಡಲಾಗಿದೆ.
ಜಾಹೀರಾತನ್ನು ಬರೆಯಲು ಅಥವಾ ಚಿತ್ರಿಸಲು ಜವಾಬ್ದಾರಿಹೊತ್ತ ಅಥವಾ ರಚಿಸಿದ ವ್ಯಕ್ತಿಯ ಹೆಸರು ಮತ್ತು ಶೀರ್ಷಿಕೆಯನ್ನು ಜಾಹೀರಾತಿಗೆ ಲಗತ್ತಿಸಬೇಕು. ವ್ಯಕ್ತಿಗಳನ್ನು ಅಪರಾಧ ಕ್ರತ್ಯಕ್ಕೆ ಪ್ರೇರೇಪಿಸುವ ಅಥವಾ ಧಾರ್ಮಿಕ ಭಾವನೆಗಳನ್ನು ಕೆರಳಿಸುವ ಜಾಹೀರಾತುಗಳನ್ನು ಪ್ರಕಟಿಸಬಾರದು. ಕೊಲೆಗಳ,ರಕ್ತಸಾಕ್ಷಿ ಆದವರು ಎಂಬೆಲ್ಲ ಚಿತ್ರಗಳನ್ನು ಜಾಹೀರಾತುಗಳಲ್ಲಿ ಅಥವಾ ಗೀಚುಬರಹದಲ್ಲಿ ಸೇರಿಸಬಾರದು ಎಂದು ಆಯೋಗ ಹೇಳಿದೆ.