ಕುಂಬಳೆ: ಕೊರೋನ ವಿರುದ್ಧ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದು ತಮ್ಮ ಜೀವನವನ್ನು ಬಲಿಗೊಟ್ಟ ಸೂರಂಬೈಲು ಶಾಲೆಯ ಅಧ್ಯಾಪಕ ಪದ್ಮನಾಭ ಮುಖಾರಿಕಂಡ ಇವರ ನಿಧನಕ್ಕೆ ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕರ ಸಂಘದ ಅಧ್ಯಕ್ಷ ರವೀಂದ್ರನಾಥ್ ಕೆ ಆರ್ ಅಗಾಧ ಶೋಕ ವ್ಯಕ್ತಪಡಿಸಿದ್ದಾರೆ.
ಕೇರಳದ ಇತರ ಯಾವುದೇ ಜಿಲ್ಲೆಯಲ್ಲಿ ಇಲ್ಲದ ಮಾಶ್(ಕೋವಿಡ್ ನಿಯಂತ್ರಣ ಚಟುವಟಿಕೆ) ನಂತಹ ಕೆಲಸಕ್ಕೆ ಅಧ್ಯಾಪಕರನ್ನು ನೇಮಕ ಮಾಡುವಾಗ ಅವರ ರಕ್ಷಣೆಗೆ ಏನನ್ನೂ ಮಾಡದೆ ಅಧ್ಯಾಪಕರು ಜೀವ ಕಳೆದುಕೊಳ್ಳುವಂತಾಯಿತು ಎಂದು ಶೋಕ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಅಧ್ಯಾಪಕರ ಚಿಕಿತ್ಸೆಗೆ ತೋರಿಸಿದ ತೀವ್ರ ಅಸಡ್ಡೆಗೆ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇನ್ನು ಮುಂದೆ ಅಧ್ಯಾಪಕರು ತಮ್ಮ ಪ್ರಾಣರಕ್ಷಣೆಗೆ ಮೊದಲು ಆದ್ಯತೆ ನೀಡಬೇಕಾದುದರಿಂದ ಇಂತಹ ಕಾರ್ಯಗಳಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಿದರೆ ಮಾತ್ರ ತೆರಳಿದರೆ ಸಾಕೆಂದು ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕರ ಸಂಘ ಅಧ್ಯಾಪಕರಲ್ಲಿ ವಿನಂತಿಸಿದೆ. ಮೃತರ ಬಡ ಕುಟುಂಬಕ್ಕೆ ಈ ಕೂಡಲೇ ಸೂಕ್ತ ಪರಿಹಾರ ನೀಡಬೇಕೆಂದು ಜಿಲ್ಲಾಧಿಕಾರಿಗಳಲ್ಲಿ ಅವರು ಒತ್ತಾಯಿಸಿದ್ದಾರೆ. ತುಂಬಾ ಕಷ್ಟದಲ್ಲಿರುವ ಕುಟುಂಬಕ್ಕೆ ಸಹೃದಯಿ ಅಧ್ಯಾಪಕ ಬಂಧುಗಳು ಸಹಾಯ ಹಸ್ತ ಚಾಚಬೇಕೆಂದು ಕೋರಲಾಗಿದೆ.